ನಾ.ಡಿ. ಸೋಜ ಅನ್ಯರ ಪ್ರಭಾವವಿಲ್ಲದೆ ಮನ್ನಣೆ ಪಡೆದ ಶ್ರೇಷ್ಠ ಸಾಹಿತಿ: ಡಾ.ಬಿ.ಎ. ವಿವೇಕ ರೈ
ಮಂಗಳೂರು: ‘‘ಪರಿಸರ, ವೈಚಾರಿಕ ಸಾಹಿತ್ಯ, ವಿಡಂಬನೆ ಅಲ್ಲದೆ ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ತರ ಸಾಧನೆಗೈಯುವ ಮೂಲಕ ಪರಮೋಚ್ಚ ಸಾಹಿತಿ ಎನಿಸಿಕೊಂಡವರು ನಾ.ಡಿ. ಸೋಜ ಎಂದು ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ ರೈ ಹೇಳಿದ್ದಾರೆ.
ಅಗಲಿದ ಸಾಹಿತಿ ನಾ.ಡಿ. ಸೋಜರಿಗೆ ಕಲ್ಕೂರ ಪ್ರತಿಷ್ಠಾನವು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು. ‘‘ಸಾರಸ್ವತ ಲೋಕದಲ್ಲಿ ಯಾರದೇ ಪ್ರಭಾವವಿಲ್ಲದೆ ಸ್ವಸಾಮರ್ಥ್ಯದಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳನ್ನು ಪಡೆದುದಲ್ಲದೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ನಿರ್ವಹಿಸಿರುವುದು ಇವರ ಬರವಣಿಗೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ’’ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನಾ.ಡಿ. ಸೋಜ ಅವರೊಂದಿಗಿನ ತಮ್ಮ ನಿಕಟ ಸಂಬಂಧವನ್ನು ನೆನಪಿಸಿಕೊಂಡರಲ್ಲದೇ ಭಾರತೀಯ ಸಂಸ್ಕೃತಿಯ ಬಗ್ಗೆ ಯಾವುದೇ ಮತ ಭೇದವಿಲ್ಲದೆ ಅವರ ಸ್ವತಂತ್ರ ನಿಲುವು ಶ್ಲಾಘನೀಯವಾದದ್ದು ಎಂದರು.
ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಸಂತಸಪಡುತ್ತಿದ್ದ ಅವರ ಯಕ್ಷಗಾನ ಪ್ರೀತಿಯನ್ನು ಸ್ಮರಿಸಿದರು.
ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ. ಎಂ.ಬಿ. ಪುರಾಣಿಕ್, ಎಸ್.ವಿ. ಪ್ರಭಾಕರ ಶರ್ಮ, ಪಿ. ಬಿ. ಹರೀಶ್ ರೈ, ಡಾ. ಎಂ.ಪ್ರಭಾಕರ ಜೋಶಿ, ಎಚ್. ಶಶಿಧರ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಟಿ. ಸುಬ್ರಹ್ಮಣ್ಯ ರಾವ್, ಚಂದ್ರಶೇಖರ ಮಯ್ಯ, ಕೆ. ತಾರಾನಾಥ ಹೊಳ್ಳ., ಪ್ರಭಾಕರ ರಾವ್ ಪೇಜಾವರ, ಶೇಷಾದ್ರಿ ಪಿ. ಭಟ್,ಪ್ರಕಾಶ್ ನಾಯಕ್, ಸಿ. ರಮೇಶ ಆಚಾರ್ಯ, ಭುವನಾಭಿರಾಮ ಉಡುಪ, ಕೃಷ್ಣಮೂರ್ತಿ, ಜೆ.ಕೆ. ಭಟ್ ಸೇರಾಜೆ, ತಮ್ಮ ಲಕ್ಷ್ಮಣ, ಪಿ.ವಿ. ಪರಮೇಶ್, ಸುಮಾ ಪ್ರಸಾದ್, ಪೂರ್ಣಿಮಾ ರಾವ್ ಪೇಜಾವರ, ತೋನ್ಸೆ ಪುಷ್ಕಳ ಕುಮಾರ್, ಡಾ. ಪ್ರಸನ್ನ ರೈ. ಕೆ, ದಯಾನಂದ ಕಟೀಲ್ ಇವರು ಉಪಸ್ಥಿತರಿದ್ದು ನಾ.ಡಿ’ಸೋಜಾರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.