ಪಾಲಿಕೆಯಿಂದ ಶುದ್ಧೀಕರಿಸಿದ ನೀರೇ ಜನರಿಗೆ ಪೂರೈಕೆ; ಕಾಂಗ್ರೆಸ್ ನಾಯಕರ ಆರೋಪ ಸುಳ್ಳು: ಮೇಯರ್ ಮನೋಜ್ ಕುಮಾರ್

Update: 2025-01-08 15:09 GMT

ಮಂಗಳೂರು, ಜ.8: ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಶುದ್ಧೀಕರಿಸಿದ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಅರ್ಧದಷ್ಟು ಪ್ರದೇಶಗಳಿಗೆ ಸಂಸ್ಕರಿಸದೇ ಇರುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ವಿಪಕ್ಷ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು ಎಂದು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೀರು ಶುದ್ಧೀಕರಣ ನಡೆಯುವ ಬೆಂದೂರು ಘಟಕಕ್ಕೆ ತಾನು ಭೇಟಿ ನೀಡಿದ್ದು, ಅಶುದ್ಧ ನೀರು ಸರಬರಾಜು ಆಗುವುದು ಕಂಡುಬಂದಿಲ್ಲ. ಯಾವುದೇ ಕಾರಣಕ್ಕೂ ನಗರದ ಜನರಿಗೆ ಅಶುದ್ಧ ನೀರು ನೀಡುತ್ತಿಲ್ಲ. ಕಾಂಗ್ರೆಸ್ ನಾಯಕರು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಸ್ಕರಿಸಿದ ನೀರನ್ನೇ ನೀಡುತ್ತಿದ್ದೇವೆ ಎಂಬುದಷ್ಟೇ ಸತ್ಯ. ಸತ್ಯ ಇದೇ ಇರುವಾಗ ಕಾಂಗ್ರೆಸ್‌ನವರ ಸತ್ಯಶೋಧನಾ ಸಮಿತಿಯ ಅಗತ್ಯವೇ ಇಲ್ಲ ಎಂದು ಹೇಳಿದ ಮೇಯರ್, ಪ್ರತಿ ತಿಂಗಳು ನೀರನ್ನು ಫಿಶರೀಸ್ ಕಾಲೇಜಿನ ಪ್ರಯೋಗಾಲ ಯದಲ್ಲಿ ಪರೀಕ್ಷೆ ಮಾಡುತ್ತಿದ್ದು, ಕುಡಿಯಲು ಯೋಗ್ಯವಾದ ನೀರನ್ನೇ ನೀಡುತ್ತಿದ್ದೇವೆ ಎಂದರು.

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು ಪ್ರದೇಶದಲ್ಲಿ ಒಂದು ಟ್ಯಾಂಕ್‌ನಿಂದ ಒಂದು ಹಂತದ ಶುದ್ಧೀಕರಣ ಆಗಿಯೇ ಸರಬರಾಜು ಆಗುತ್ತದೆ. ಅಲ್ಲಿರುವ ಇನ್ನೊಂದು ಟ್ಯಾಂಕ್‌ನಲ್ಲಿ ಶುದ್ಧೀಕರಣ ಆಗಲ್ಲ, ಆ ನೀರನ್ನು ಪಣಂಬೂರಿನಲ್ಲಿ ಶುದ್ಧೀಕರಣ ಮಾಡಿ ಪೂರೈಕೆ ಮಾಡಲಾಗುತ್ತಿದೆ ಎಂದರು.

ಒಳಚರಂಡಿ ನೀರಿಗೂ ಕುಡಿಯುವ ನೀರಿಗೂ ಯಾವ ಸಂಪರ್ಕವೂ ಇಲ್ಲ ಎಂದು ಹೇಳಿದ ಮೇಯರ್, ನಗರದ ಒಳಚರಂಡಿ ವ್ಯವಸ್ಥೆಯ ವೆಟ್‌ವೆಲ್‌ಗಳು, ಎಸ್‌ಟಿಪಿಗಳೆಲ್ಲ ಇರೋದು ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ. ಒಳಚರಂಡಿ ನೀರು ಯಾವ ಕಾರಣಕ್ಕೂ ತುಂಬೆ ಅಣೆಕಟ್ಟು ಸೇರಲ್ಲ ಎಂದರು.

ಗುಜ್ಜರಕೆರೆ, ಕಾವೂರು ಕೆರೆಗೆ ಒಳಚರಂಡಿ ನೀರು ಸೇರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್ ಮನೋಜ್ ಕುಮಾರ್, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ನಗರದೊಳಗಿನ ದೊಡ್ಡ ಕೆರೆಗಳ ನೀರನ್ನು ಶುದ್ಧ ರೀತಿಯಲ್ಲೇ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಈ ಕೆರೆಗಳಿಗೆ ಒಳಚರಂಡಿ ನೀರು ಸೇರುತ್ತಿರುವ ಬಗ್ಗೆ ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.

ಉಪ ಮೇಯರ್ ಭಾನುಮತಿ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳಾ, ಮನೋಹರ ಕದ್ರಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News