ಹಳೇ ನಾಣ್ಯ ಖರೀದಿಸುವ ಸೋಗಿನಲ್ಲಿ 58.26 ಲಕ್ಷ ರೂ. ವಂಚನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ಜ.8: ಹಳೇ ನಾಣ್ಯ ಖರೀದಿಸುವ ಸೋಗಿನಲ್ಲಿ ವ್ಯಕ್ತಿಯೊಬ್ಬ ಕಾವೂರಿನ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 58,26,399 ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ವರದಿಯಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಫೇಸ್‌ಬುಕ್ ನೋಡುತ್ತಿದ್ದಾಗ ಅದರದಲ್ಲಿ ಹಳೇ ನಾಣ್ಯಗಳನ್ನು ಖರೀದಿಸಿ ಹೆಚ್ಚಿನ ಹಣ ನೀಡಲಾಗುವುದು ಎಂಬ ಜಾಹೀರಾತು ಗಮನಿಸಿದ್ದರು.ಅದರಂತೆ ಅವರಲ್ಲಿದ್ದ 15 ಹಳೇ ನಾಣ್ಯಗಳ ಫೋಟೋ ತೆಗೆದು ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್‌ಗೆ ವಾಟ್ಸಾಪ್ ಕಳುಹಿಸಿದ್ದಾರೆ. ಅಪರಿಚಿತ ವ್ಯಕ್ತಿ ಹಳೇ ನಾಣ್ಯ ಖರೀದಿ ಮಾಡಿ 49 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾನೆ. ಇದನ್ನು ಒಪ್ಪಿಕೊಂಡ ದೂರುದಾರರು ಆತ ಹೇಳಿದಂತೆ ಆರ್‌ಬಿಐ ನೋಂದಣಿ ಮಾಡಲು 750 ರೂ., ಜಿಎಸ್ಟಿ ಪ್ರೊಸೆಸಿಂಗ್‌ಗಾಗಿ 17,500 ರೂ., ಇನ್ಸುರೆನ್ಸ್ ಶುಲ್ಕ 94,500 ರೂ, ಟಿಡಿಎಸ್ 49,499, ಜಿಪಿಎಸ್ ಶುಲ್ಕ 71,500 ರೂ., ಐಟಿಆರ್ ಶುಲ್ಕ 39,990, ಆರ್‌ಬಿಐ ನೋಟಿಸ್ ಪೆಂಡಿಂಗ್ ಶುಲ್ಕ 3,50,000 ರೂ., ಹಣ ಪಾವತಿಸುವಂತೆ ಹೇಳಿದ್ದಾನೆ. ಅದರಂತೆ ದೂರುದಾರರು ತಮ್ಮ ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿದ್ದಾರೆ.
ನಂತರ ಡಿ.15ರಂದು ದೂರುದಾರರಿಗೆ ಮುಂಬೈ ಸೈಬರ್ ಪೊಲೀಸ್ ಕಮಿಶನರ್ ಹೆಸರಲ್ಲಿ ಕರೆ ಬಂದಿದೆ. ಆರ್‌ಬಿಐನಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸಲಾಗುವುದು ಎಂದು ಬೆದರಿಸಿದ್ದಾನೆ. ಇದಕ್ಕಾಗಿ ಆರ್‌ಬಿಐ ಮಾರ್ಗಸೂಚಿ ಪ್ರಕಾರ 12,55,000 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಅದರಂತೆ ಆತ ತಿಳಿಸಿದ ಬ್ಯಾಂಕ್ ಖಾತೆಗಳಿಗೆ 9 ಲಕ್ಷ ರೂ. ವರ್ಗಾ ವಣೆ ಮಾಡಿದ್ದಾರೆ. ಆಗ ಸಂಶಯದಿಂದ ಪ್ರಶ್ನಿಸಿದಾಗ ಆತ ಗದರಿಸಲು ಆರಂಭಿಸಿದ್ದಾನೆ. 2024 ನ.25ರಿಂದ ಡಿ.30ರ ತನಕ ಆರೋಪಿಯು ವಿವಿಧ ಸಂಖ್ಯೆಗಳಿಂದ ಕರೆ ಮಾಡಿ ಹಣ ಪಾವತಿಸುವಂತೆ ತಿಳಿಸಿ, ಹಂತ ಹಂತವಾಗಿ 58,26,399 ರೂ. ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.