ದ.ಕ.ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶ: ಸ್ಪೀಕರ್ ಯುಟಿ ಖಾದರ್

Update: 2023-09-27 13:27 GMT

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲವಾದ ಅವಕಾಶವಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಅಗತ್ಯದ ಅನುಕೂಲತೆಗಳು ಕರಾವಳಿಯಲ್ಲಿ ಇರುವಷ್ಟು ದೇಶದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅಭಿಪ್ರಾಯಪಟ್ಟರು.

ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಬುಧವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಜಿಲ್ಲಾ ಪ್ರವಾಸೋದ್ಯಮ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ಪ್ರವಾಸೋದ್ಯಮ ದಿನಾಚರಣೆ ಮಾಡಿದರೆ ಸಾಲದು , ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆ ಹಾಕಿ ಕೊಂಡು , ಆಗಾಗ ಪ್ರಗತಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಮತ್ತು ಜನಪ್ರನಿಧಿಗಳು , ಸಂಘ ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು ಎಂದರು.

ದ.ಕ.ಜಿಲ್ಲೆಯಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಜಲಮಾರ್ಗ , ರೈಲು ಎಲ್ಲವೂ ಇದೆ.ದೇಶದಲ್ಲಿ ಮುಂಬೈಯನ್ನು ಹೊರತಪಡಿಸಿದರೆ ಸಂಪರ್ಕದ ಎಲ್ಲ ಅನುಕೂಲತೆಗಳು ಇರುವ ನಗರ ಮಂಗಳೂರು. ಆದರೆ ನಮ್ಮಲ್ಲಿ ಇಚ್ಛಾ ಶಕ್ತಿ ಇಲ್ಲ. ಪ್ರವಾಸಿಗರನ್ನು ಆಕರ್ಷಿಸುವ ತಾಣಗಳ ಅಭಿವೃದ್ಧಿಯಾಗುತ್ತಿಲ್ಲ. ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಮಾಹಿತಿ ಸಮರ್ಪಕ ವಾಗಿ ಸಿಗುವಂತಾಗಬೇಕು ಎಂದು ಹೇಳಿದರು.

ಎಸ್‌ಇಝಡ್‌ನಿಂದ ಸಮಸ್ಯೆ: ವಿಶೇಷ ಆರ್ಥಿಕ ವಲಯ ಧನಾತ್ಮಕ ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸಲು ವಿನ್ಯಾಸಗೊಳಿ ಸಲಾದ ಪ್ರದೇಶವಾಗಿದೆ. ಇದರ ಉದ್ದೇಶ ಚೆನ್ನಾಗಿದೆ. ಆದರೆ ಮಂಗಳೂರಿನಲ್ಲಿ ಎಸ್‌ಇಝೆಡ್ ರೂಪುಗೊಂಡ ಬಳಿಕ ಆನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ಮೀನುಗಾರರ ಬದುಕು ದುಸ್ತರವಾಗಿದೆ ,ಅವರಿಗೆ ಮನೆಕಟ್ಟಲು ಹಕ್ಕುಪತ್ರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂಪಿ, ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಪ್ರವಾಸಿ ಮಿತ್ರ’ ಯೋಜನೆಯಲ್ಲಿ ತರಬೇತಿ ಪಡೆದ ಹೋಮ್ ಗಾರ್ಡ್‌ಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಸ್ವಾಗತಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News