ನಿರ್ದಿಷ್ಟ ಧರ್ಮದ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ: ದ.ಕ.ಜಿಲ್ಲಾಧಿಕಾರಿ, ಮಂಗಳಾದೇವಿ ದೇವಸ್ಥಾನದ ಆಡಳಿತಾಧಿಕಾರಿಗೆ ಮನವಿ
ಮಂಗಳೂರು: ನಗರದ ಕೆಲವು ದೇವಸ್ಥಾನಗಳಲ್ಲಿ ನಡೆಯುವ ನವರಾತ್ರಿ ಉತ್ಸವದ ಸಂದರ್ಭ ಜಾತ್ರೆ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಧರ್ಮದ ನೆಪವನ್ನಿಟ್ಟು ವ್ಯಾಪಾರ ಮಾಡಲು ಅವಕಾಶ ನಿರಾಕರಿಸುವ ಅರೋಪ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಂಘದ ಸಮನ್ವಯ ಸಮಿತಿಯು ಒತ್ತಾಯಿಸಿದೆ.
ಮಂಗಳಾದೇವಿ ದೇವಸ್ಥಾನದ ಉತ್ಸವದ ವೇಳೆ ಜಾತ್ರೆ ವ್ಯಾಪಾರ ಮಾಡಲು ನಿರ್ದಿಷ್ಟ ಧರ್ಮದ ವ್ಯಾಪಾರಕ್ಕೆ ಅವಕಾಶ ನಿರಾಕರಿಸುತ್ತಿರುವ ಆರೋಪವಿದೆ. ಜಾಗ ಹಂಚಿಕೆ ಮಾಡುವಾಗ ನಿರ್ದಿಷ್ಟ ಧರ್ಮದ ವ್ಯಾಪಾರಿಗಳಿಗೆ ಅವಕಾಶ ನಿರಾಕರಿ ಸುತ್ತಿರುವುದು ಜಾತ್ರೆ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿದುಕೊಂಡಂತಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಯಾರದೇ ಒತ್ತಡಕ್ಕೆ ಮಣಿಯದೆ ಈ ಹಿಂದೆ ನಡೆಯುತ್ತಿದ್ದಂತೆಯೇ ಎಲ್ಲಾ ಜಾತ್ರೆ ವ್ಯಾಪಾರಿಗಳಿಗೂ ಅವಕಾಶ ನೀಡಬೇಕು ಎಂದು ಸಮಿತಿಯು ದ.ಕ.ಜಿಲ್ಲಾಧಿಕಾರಿ ಹಾಗೂ ಮಂಗಳಾದೇವಿ ದೇವಸ್ಥಾನದ ಆಡಳಿತಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದೆ.
ನಗರದಲ್ಲಿ ಜಾತ್ರೆ ವ್ಯಾಪಾರ ನಡೆಯುವುದು ಪಾಲಿಕೆಗೆ ಸೇರಿದ ಜಾಗದಲ್ಲಾಗಿದೆ. ಆದರೆ ಕೆಲವು ಗುತ್ತಿಗೆದಾರರು ವ್ಯಾಪಾರಿ ಗಳಿಗೆ ಒಂದು ಅಡಿ ಜಾಗಕ್ಕೆ 7 ಸಾವಿರ ರೂ. ದರವನ್ನು ನಿಗದಿಪಡಿಸುತ್ತಿರುವ ದೂರುಗಳಿವೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಮಿತಿಯ ನಿಯೋಗವು ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತರನ್ನು ಒತ್ತಾಯಿಸಿವೆ.
ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಪ್ರವೀಣ್ ಕುಮಾರ್ ಕದ್ರಿ, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನ ಮೊಗರು, ಜಾತ್ರೆ ವ್ಯಾಪಾರಸ್ಥರ ಸಂಘದ ಮುಖಂಡರಾದ ರಫೀಕ್ ಹಳೆಯಂಗಡಿ, ಅಶ್ರಫ್ ಮೂಡುಬಿದಿರೆ, ಉಮರ್, ಉಂಞ ಜೋಕಟ್ಟೆ, ಸಾದಿಕ್ ಪಡುಬಿದ್ರೆ, ಅಬ್ದುಲ್ ರಝಾಕ್ ಕಾಜೂರ್, ಇಬ್ರಾಹಿಂ ಮಂಗಳೂರು ನಿಯೋಗದಲ್ಲಿದ್ದರು.