ತುರ್ತು ಪರಿಸ್ಥಿತಿ ಬಗ್ಗೆ ಬಿಜೆಪಿಗರಿಂದ ವೃಥಾ ಆರೋಪ: ರಮಾನಾಥ ರೈ

Update: 2024-07-18 09:23 GMT

ಮಂಗಳೂರು, ಜು. 18: ದೇಶದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರೂ ದ.ಕ.ಜಿಲ್ಲೆಯಲ್ಲಿ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಿಲ್ಲ, ಆದರೆ ಬಿಜೆಪಿಗರು ತುರ್ತು ಪರಿಸ್ಥಿತಿ ವಿರುದ್ಧ ಕಾಂಗ್ರೆಸ್ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಹಾಗೂ ಸೈನ್ಯ ಸರಕಾರದ ವಿರುದ್ಧ ಬಂಡೇಳುವ ಸನ್ನಿವೇಶದಲ್ಲಿ ಇಂದಿರಾ ಗಾಂಧಿ ಪ್ರಜಾಪ್ರಭುತ್ವ ಉಳಿವಿಗಾಗಿ ತುರ್ತು ಪರಿಸ್ಥಿತಿ ಘೋಷಿಸಿದರು. ಆದರೆ ಅದೇ ವೇಳೆ ಭೂಮಸೂದೆಯನ್ನೂ ಜಾರಿಗೆ ತಂದಿದ್ದಾರೆ. ಬ್ಯಾಂಕ್ ಹಾಗೂ ಬಸ್‌ಗಳ ರಾಷ್ಟ್ರೀಕರಣ ಮಾಡಿದ್ದಾರೆ. ಋಣ ಪರಿಹಾರ ಕಾಯ್ದೆಯಡಿ ಬಡವರಿಗೆ ಪರಿಹಾರ ಒದಗಿಸಿದ್ದಾರೆ. ಇಷ್ಟೆಲ್ಲ ಸುಧಾರಣೆಗಳು ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇದರ ಹೊರತು ತುರ್ತು ಪರಿಸ್ಥಿಯಿಂದ ದ.ಕ.ಜಿಲ್ಲೆಯಲ್ಲಿ ಯಾರಿಗೂ ಏನೂ ಆಗಿಲ್ಲ ಎಂದು ಸಮರ್ಥಿಸಿಕೊಂಡರು.

ಈ ಎಲ್ಲ ಸುಧಾರಣಾ ಕ್ರಮಗಳಿಂದಾಗಿ ಈಗಲೂ ಜನಸಾಮಾನ್ಯರಿಗೆ ಕಾಂಗ್ರೆಸ್ ಮೇಲೆ ಹೆಚ್ಚು ಪ್ರೀತಿ ಇದೆ. ಇದನ್ನು ಸಹಿಸದ ಬಿಜೆಪಿಗರು ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಬಡವರಿಗೆ ಶ್ರೀಮಂತರ ಕುಮ್ಕಿ ಜಾಗದ ಹಕ್ಕು ನೀಡಿದೆ. ಇಂದಿರಾ ಗಾಂಧಿ ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದು, ಬಳಿಕ ರಾಜೀವ್‌ಗಾಂಧಿ ಮತ್ತಿತರರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು ನೆನಪಿಸದೆ ಬಿಜೆಪಿಗರು ತುರ್ತು ಪರಿಸ್ಥಿತಿ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಹಿಂದುಗಳ ಬಗ್ಗೆ ಸರಿಯಾದ ಮಾತನ್ನೇ ಹೇಳಿದ್ದಾರೆ. ಇದನ್ನೇ ಶಂಕರಾಚಾರ್ಯರೂ ಸಮರ್ಥಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನು ಸರಿಯಾಗಿ ಅರ್ಥೈಸದೆ, ವಿನಾ ಕಾರಣ ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ಮಾತು ಕಲಾಪದ ಕಡತದಲ್ಲೂ ದಾಖಲಾಗಿದೆ. ಹಾಗಾಗಿ ಬಿಜೆಪಿಯ ಆರೋಪಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಸೂಕ್ತವಾಗಿ ಉತ್ತರಿಸಬೇಕು ಎಂದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಅಪ್ಪಿ, ಚಿತ್ತರಂಜನ್ ಶೆಟ್ಟಿ, ಜಯಶೀಲ ಅಡ್ಯಂತಾಯ, ಸುರೇಂದ್ರ ಕಂಬಳಿ, ಚೇತನ್, ಯೋಗೀಶ್ ನಾಯ್ಕ್, ಬೇಬಿ ಕುಂದರ್, ನಿಯಾಸ್ ರಾಡ್ರಿಗಸ್, ನಿತ್ಯಾನಂದ ಶೆಟ್ಟಿ, ನಝೀರ್ ಬಜಾಲ್ ಇದ್ದರು.

 

ರಾಜ್ಯ ಸರಕಾರ ಕುಮ್ಕಿ ಹಕ್ಕಿನ ಜಮೀನನ್ನು ಲೀಸ್‌ಗೆ ನೀಡಲು ಆದೇಶ ಹೊರಡಿಸಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ವಾಸ್ತವದಲ್ಲಿ ಕುಮ್ಕಿ ಜಾಗದಲ್ಲಿ ರಬ್ಬರ್, ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆಸುವ ಕೃಷಿಕರಿಗೆ ಅನುಕೂಲ ಮಾಡುವ ಕಾರಣಕ್ಕೆ ಕುಮ್ಕಿ ಜಾಗವನ್ನು ಗುತ್ತಿಗೆ ಕೊಡವ ಆದೇಶವನ್ನು ಸಕಾರ ಮಾಡಲು ಹೊರಟಿದೆ. ಬಿಜೆಪಿಗೆಯವರಿಗೆ ಮಾಹಿತಿಯ ಕೊರತೆ ಇದೆ 94ಇಯಲ್ಲಿ ಕೃಷಿಕರಿಗೆ ಗುತ್ತಿಗೆ ಕೊಡುವಂತಹ ಅವಕಾಶ ಕೊಡಲಾಗುತ್ತದೆ. ಭೂ ಮಸೂದೆ, ಬಗರ್ ಹುಕುಂ, 94ಸಿ ಮೊದಲಾದ ಕಾಯ್ದೆಯಡಿ ಬಡವರಿಗೆ ಭೂಮಿ ಕೊಟ್ಟ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ. ಹಾಗಾಗಿ ಬಿಜೆಪಿಗರು ಹೇಳುವಂತೆ ಕೃಷಿಗೆ ಬೇಕಾಗುವ ಸೊಪ್ಪುಮತ್ತಿತರ ಸೊತ್ತು ಹೊಂದಿರುವ ರೈತರ ಕುಮ್ಕಿ ಜಮೀನನ್ನು ಲೀಸ್‌ಗೆ ಕೊಡುವ ಕುರಿತ ಆದೇಶ ಅದಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News