ಮಂಗಳೂರು ವಿಧಾನಸಭಾ ಕ್ಷೇತ್ರ| 2 ಯೋಜನೆಗೆ ಸಂಪುಟ ಅಸ್ತು: ಸ್ಪೀಕರ್ ಯು.ಟಿ.ಖಾದರ್

Update: 2024-12-28 13:52 GMT

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ 200 ಕೋಟಿ ರೂ.ಗಳಲ್ಲಿ ಕೋಟೆಪುರ-ಬೋಳಾರದವರೆಗೆ ನೇತ್ರಾವತಿ ನದಿಗೆ ಪರ್ಯಾಯ ಸೇತುವೆ ನಿರ್ಮಾಣ ಹಾಗೂ ಸಜಿಪನಡುವಿನಿಂದ ತುಂಬೆವರೆಗೆ 62 ಕೋಟಿ ರೂ.ಗಳಲ್ಲಿ ಸೇತುವೆ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಮಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮುದ್ರ ತೀರದಲ್ಲಿ ಕೇರಳವರೆಗೆ ಕಾರ್ನಿಶ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಪ್ಪು ಮಹಾಕಾಳಿಪಡ್ಪುವಿಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಆರಂಭವಾದ ಬಳಿಕ ಪಂಪ್‌ವೆಲ್ ಮೂಲಕ ಹೋಗುವವರಿಗೆ ಹಾಗೂ ತೊಕ್ಕೊಟ್ಟಿನಿಂದ ಪಂಪ್‌ವೆಲ್ ಹಾದಿಯಲ್ಲಿ ಟ್ರಾಫಿಕ್ ದಟ್ಟನೆ ಕಡಿಮೆಯಾಗಲಿದೆ ಎಂದವರು ಹೇಳಿದರು.

ಬೆಳಗಾವಿಯಲ್ಲಿ 16 ವಿಧೇಯಕ ಪಾಸ್

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ 16ನೇ ವಿಧಾನಸಭೆಯ 5ನೇ ಅಧಿವೇಶನ 8 ದಿನಗಳ ಕಾಲ 63 ಗಂಟೆ 57 ನಿಮಿಷಗಳ ಕಾರ್ಯಕಲಾಪ ನಡೆದಿದೆ. ಧನವಿನಿಯೋಗ ಸೇರಿ ಒಟ್ಟು 16 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

2024ನೇ ಸಾಲಿನ ಕರ್ನಾಟಕ ವಿಧಾನಮಂಡಲ(ಅನರ್ಹತಾ ನಿವಾರಣೆ)(ತಿದ್ದುಪಡಿ) ವಿಧೇಯಕ ಮತ್ತು 2024ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಮಂತರ ಯೋಜನೆ(ತಿದ್ದುಪಡಿ) ವಿಧೇಯಕಗಳನ್ನು ವಾಪಸ್ ಪಡೆಯಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 49 ಸದಸ್ಯರು ಭಾಗವಹಿಸಿದ್ದು, 13 ಗಂಟೆ 11 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ ಎಂದರು.


ರಾಜ್ಯದಲ್ಲಿ ಬಾಣಂತಿ ಸಾವು, ಅನುದಾನದ ಕೊರತೆ, ಅಭಿವೃದ್ಧಿ ಬಗ್ಗೆ ನಿಯಮ 60ರಡಿ ನಿಲುವಳಿ ಸೂಚನೆಯಡಿ ಚರ್ಚೆ ನಡೆಸಲಾಗಿದೆ. ಒಟ್ಟು 3,004 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾದ 150 ಪ್ರಶ್ನೆಗಳ ಪೈಕಿ 137 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 444 ಗಮನ ಸೆಳೆಯುವ ಸೂಚನೆ ಪೈಕಿ 294 ಸೂಚನೆಗಳಿಗೆ ಉತ್ತರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 5 ಸೂಚನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಹಾಲಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ವಿಚಾರದಲ್ಲಿ ಶಾಸಕಾಂಗದ ಕಾರ್ಯದರ್ಶಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಪ್ರಕರಣದಂತಹ ಘಟನೆಗಳು ನಡೆಯಬಾರದು. ಸದನದ ಒಳಗೆ ಮಾತ್ರವಲ್ಲ, ಹೊರಗೂ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅದಕ್ಕಾಗಿ ಸದನ ಬಳಿಕವೂ ಕ್ಯಾಮರಾ ಚಿತ್ರೀಕರಣ ಮುಂದುವರಿಸುವ ಅವಶ್ಯಕತೆ ಇಲ್ಲ. ವಿಧಾನಸಭಾ ನಿಯಮದಂತೆ ಅಧಿವೇಶನ ವೇಳೆ ಮಾತ್ರ ಕ್ಯಾಮರಾ ರೆಕಾರ್ಡ್ ಮಾಡಲಾಗುತ್ತದೆ. ಅಧಿವೇಶನದ ನಂತರ ಕ್ಯಾಮರಾ ರೆಕಾರ್ಡ್ ಮಾಡುತ್ತಿಲ್ಲ. ಅದನ್ನು ಆರಂಭಿಸುವ ಹೊಸ ಸಂಪ್ರದಾಯವನ್ನು ನಾನು ಜಾರಿಗೆ ತರುವುದಿಲ್ಲ ಎಂದು ಹೇಳಿದ ಸ್ಪೀಕರ್ ಯು.ಟಿ.ಖಾದರ್, ಕಲಾಪದ ಬಳಿಕ ವರಾಂಡ ಅಥವಾ ಬೇರೆಡೆ ಕುಳಿತು ಮಾತನಾಡುವ ಸಂದರ್ಭ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಸುವರ್ಣ ಸೌಧದೊಳಗೆ ಪೊಲೀಸರ ಪ್ರವೇಶದ ಕುರಿತು ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣ ವಿಧಾನ ಪರಿಷತ್ ವ್ಯಾಪ್ತಿಗೆ ಬರುವುದರಿಂದ ಸ್ಥಳ ಮಹಜರು ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಪರಿಷತ್ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಘಟನಾ ಸ್ಥಳ ಮಹಜರಿಗೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಯಾರ ಅನುಮತಿ ಪಡೆಯಬೇಕೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಘಟನೆ ನಡೆದಿರುವುದು ಪರಿಷತ್‌ನಲ್ಲಿ. ಅಲ್ಲಿ ಅಸೆಂಬ್ಲಿ ಸ್ಪೀಕರ್ ವಿಚಾರ ಬರುವುದಿಲ್ಲ. ಹಾಗಾಗಿ ಪರಿಷತ್ ಸಭಾಪತಿಗಳೇ ನಿಯಮಾನುಸಾರ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾಗಿರುವುದರಿಂದ ಅವರ ವಿಚಾರ ನನ್ನ ವ್ಯಾಪ್ತಿಗೆ ಬರುತ್ತದೆ. ಅವರು ಪ್ರಕರಣ ಬಗ್ಗೆ ದೂರು ನೀಡಿದ್ದು, ಅದನ್ನು ಪ್ರಿವಿಲೇಜ್ ಕಮಿಟಿಗೆ ವಹಿಸಲಾಗಿದೆ ಎಂದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News