ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಖಂಡನಾ ನಿರ್ಣಯಕ್ಕೆ ಒತ್ತಾಯ

Update: 2024-12-22 08:56 GMT

ಮಂಗಳೂರು, ಡಿ. 22: ಗೃಹ ಸಚಿವ ಅಮಿತ್ ಶಾರವರು ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದು, ಈಬಗ್ಗೆ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ದ.ಕ.ಜಿಲ್ಲಾ ದಲಿತ ಸಂಘಟನೆಗಳು ಕೂಡಾ ಅವರ ಹೇಳಿಕೆಯನ್ನು ಖಂಡಿಸಿರುವ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು ಅದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಕಳುಹಿಸಿ ಕಾನೂನು ಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ಸಂಚಾಲಕ ಎಸ್.ಪಿ. ಆನಂದ್ ಒತ್ತಾಯಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು.

ಅಂಬೇಡ್ಕರ್ ಅವರ ಸಂವಿಧಾನದಿಂದಲೇ ದಲಿತರು ಇಂದು ಉಸಿರಾಟದ ಜೀವನ ನಡೆಸಲು ಸಾಧ್ಯವಾಗಿದೆ. ಅಂತಹ ಶ್ರೇಷ್ಠ ವ್ಯಕ್ತಿಯ ಬಗ್ಗೆ ಕೇವಲವಾಗಿ ಮಾತನಾಡುವವರ ವಿರುದ್ಧ ಕ್ರಮ ಆಗಬೇಕು ಎಂದು ಎಸ್.ಪಿ. ಆನಂದ್ ಆಗ್ರಹಿಸಿದರು.

ಪ್ರೇಮನಾಥ್ ಮಾತನಾಡಿ, ಉರ್ವಾಸ್ಟೋರಿನ ಅಂಬೇಡ್ಕರ್ ಭವನದ ಸುತ್ತಮುತ್ತಲಿನ ಜಾಗ ಒತ್ತುವರಿ ಆಗದಂತೆ ರಕ್ಷಿಸುವ ನಿಟ್ಟಿನಲ್ಲಿ ಆವರಣಗೋಡೆ ನಿರ್ಮಿಸಬೇಕು. ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ದಲಿತ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು ಹಾಸ್ಟೆಲ್ ಸಿಗದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಾಡಿಗೆಯಲ್ಲಿ ವಾಸಿಸುವ ಪರಿಸ್ಥಿತಿ ಇದೆ. ಈ ಬಗ್ಗೆ ಸೂಕ್ತ ಕ್ರಮ ಆಗಬೇಕು

ಎಂದಾಗ ಈ ಬಗ್ಗೆ ಮನವಿ ನೀಡಿದರೆ ಸಂಬಂಧಪಟ್ಟವರಿಗೆ ರವಾನಿಸುವುದಾಗಿ ಡಿಸಿಪಿ ಉತ್ತರಿಸಿದರು.

ಬಾಳೆಪುಣಿ ಗ್ರಾಪಂ ವ್ಯಾಪ್ತಿಯ 12 ಕೊರಗ ಕುಟುಂಬಗಳು ವಾಸಿಸುವ ಮನೆಗಳ ಮೇಲ್ಭಾಗದಲ್ಲಿ ತ್ಯಾಜ್ಯ ಸುರಿಯುವುದರಿಂದ ತೊಂದರೆಯಾಗುತ್ತಿದ್ದು, ಅದನ್ನು ಸಂಪೂರ್ಣವಾಗಿ ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಸ್ಥಳೀಯರಾದ ಬಾಬು ಆಗ್ರಹಿಸಿದರು.

ಈ ಬಗ್ಗೆ ಈಗಾಗಲೇ ಜಿಲ್ಲಾ ಮಟ್ಟದ ಸಭೆಯಲ್ಲೂ ಚರ್ಚೆ ಆಗಿದ್ದು, ಜಿ.ಪಂ. ಸಿಇಒರವರ ಮೂಲಕ ಸೂಕ್ತ ಕ್ರಮ ಆಗಲಿದೆ ಎಂದು ಡಿಸಿಪಿ ಸಿದ್ಧಾರ್ಥ್ ಗೋಯಲ್ ನುಡಿದರು.

ಮಹಿಳಾ ಪೊಲೀಸ್ ಠಾಣೆಯಲ್ಲಿ ಎಸ್‌ಐ, ಇನ್ಸ್‌ಪೆಕ್ಟರ್ ದರ್ಜೆಯಲ್ಲಿ ಮಹಿಳಾ ಪೊಲೀಸರನ್ನೇ ನೇಮಕ ಮಾಡಬೇಕು. ಇಲ್ಲವಾದಲ್ಲಿ ದೌರ್ಜನ್ಯದ ಕುರಿತಂತೆ ದೂರು ನೀಡಲು ಬರುವ ಮಹಿಳೆಯರು ಮುಜಗರ ಅನುಭವಿಸಬೇಕಾಗುತ್ತದೆ. ಮುಕ್ತವಾಗಿ ತಮ್ಮ ದೂರನ್ನು ನೀಡಲು ಕಷ್ಟವಾಗುತ್ತದೆ ಎಂದು ಎಸ್.ಪಿ. ಆನಂದ್ ಹೇಳಿದರು.

ಮಹಿಳಾ ಠಾಣೆಯಲ್ಲಿರುವ 45 ಜನ ಸಿಬ್ಬಂದಿಯಲ್ಲಿ 35 ಮಹಿಳೆಯರೇ ಆಗಿದ್ದಾರೆ. ಹಾಗಾಗಿ ದೂರುಗಳನ್ನು ಅವರ ಮೂಲಕವೂ ನೀಡಬಹುದು. ಮಹಿಳಾ ಅಧಿಕಾರಿ ನೇಮಕದ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು.

ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಕಚೇರಿ ಅಧೀನ ವಾಣಿಜ್ಯ ಸಂಪರ್ಣಗಳಲ್ಲಿ ಶೇ. 24 ಮೀಸಲನ್ನು ದಲಿತ ಸಮುದಾಯಕ್ಕೂ ನೀಡಬೇಕಾಗಿದೆ. ಆದರೆ ಸಮುದಾಯದ ಮುಗ್ದರ ಮೂಲಕ ಬಾಡಿಗೆ ಕಟ್ಟಡವನ್ನು ಇತರ ಸಮುದಾಯದವರು ಪಡೆದು ಅಧಿಕ ಬಾಡಿಗೆಗೆ ಬೇರೆಯವರಿಗೆ ನೀಡುವ ದಂಧೆ ನಡೆಯುತ್ತಿದೆ ಎಂದು ಎಸ್.ಪಿ. ಆನಂದ್ ಆರೋಪಿಸಿದರು.

ಪ್ರಸಕ್ತ ಡಬಲ್ ಪದವಿ ಹೊಂದಿದವರಿಗೂ ಸರಕಾರಿ ಕೆಲಸ ದುಸ್ಥರವಾಗಿದೆ. ಅಂಬೇಡ್ಕರ್ ನಿಗಮದ ಮೂಲಕ ಸ್ವ ಉದ್ಯೋಗಕ್ಕೆ ಅವಕಾಶವಿದ್ದು, ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆಯುತ್ತಿತ್ತು. ಇದೀಗ ಅದು ಸ್ಥಳೀಯ ಶಾಸಕರ ಮೂಲಕ ನಡೆಯುವುದರಿಂದ ಪಕ್ಷದ ಸ್ಥಿತಿವಂತ ಕಾರ್ಯಕರ್ತರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತಿದೆ. ಇದನ್ನು ಹಿಂದಿನ ಮಾದರಿಯಲ್ಲೇ ನಡೆಸಬೇಕು ಎಂದು ಎಸ್.ಪಿ. ಆನಂದ್ ಒತ್ತಾಯಿಸಿದರು.

ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಸೇವನೆ ಹೆಚ್ಚಾಗುತ್ತಿರುವ ಬಗ್ಗೆ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಅನಿಲ್ ಕಂಕನಾಡಿಯವರು ಆಗ್ರಹಿಸಿದಾಗ, ಈ ಕಾರ್ಯ ನಿರಂತರವಾಗಿ ಇಲಾಖೆಯಿಂದ ಮಾಡಲಾಗುತ್ತಿದೆ. ಈ ವರ್ಷ ಈ ಹಿಂದಿಗಿಂತಲೂ ಹೆಚ್ಚಿನ ಪ್ರಕರಣಗಳು ಡ್ರಗ್ಸ್ ವಿಚಾರವಾಗಿ ದಾಖಲಾಗಿದ್ದು, 1000ದಷ್ಟು ಸೇವನೆಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಡಿಸಿಪಿ ಸಿದ್ಧಾರ್ಥ್ ಗೋಯಲ್ ಹೇಳಿದರು. ಗಿರೀಶ್ ಕುಮಾರ್ ಅವರು ಕೂಡಾ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಸಭೆಯ ಗಮನ ಸೆಳೆದರು.

ನಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿತ್ ಕುಮಾರ್ ಎಂಬವರ ಶಾಲಾ ಕಾಲೇಜು ದಾಖಲಾತಿ ಮೂಲ ಪ್ರತಿ ತೆಗೆದಿರಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಾಂಶುಪಾಲರನ್ನು ಕರೆಸಿ ವಿಚಾರಣೆ ಮಾಡಿ ಕ್ರಮ ವಹಿಸುವ ಬದಲು ಉಪ ಪ್ರಾಂಶುಪಾಲರನ್ನು ಕರೆಸಿ ತನಿಖೆ ನಡೆಸಲಾಗಿದೆ. ಇದು ಸರಿಯಲ್ಲ ಎಂದು ಎಸ್.ಪಿ. ಆನಂದ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಎಸಿಪಿಯವರಲ್ಲಿ ವಿಚಾರಿಸಿ ಆಗಿರುವ ಕ್ರಮದ ಬಗ್ಗೆ ತಿಳಿಸುವುದಾಗಿ ಡಿಸಿಪಿ ಸಿದ್ಧಾರ್ಥ್ ಗೋಯಲ್ ತಿಳಿಸಿದಾಗ, ಇದರಿಂದ ತೃಪ್ತರಾಗದ ಆನಂದ್, ಈ ರೀತಿ ಮತ್ತೆ ಉತ್ತರಕ್ಕಾಗಿ ಒಂದು ತಿಂಗಳು ಕಾಯುವ ಪರಿಸ್ಥಿತಿ ಸರಿಯಲ್ಲ. ಇಂತಹ ದೌರ್ಜನ್ಯದ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮದ ಬಗ್ಗೆ ಗಮನ ಹರಿಸಲಾಗುತ್ತಿಲ್ಲ ಎಂದು ಹೇಳಿ ವೇದಿಕೆಯ ಎದುರು ಧರಣಿಗೆ ಮುಂದಾದರು.

ಇದರಿಂದ ಬೇಸರಗೊಂಡ ಡಿಸಿಪಿ, ನಾನು ಈಗಾಗಲೇ ಈ ಬಗ್ಗೆ ಎಸಿಪಿ ಬಳಿ ವಿಚಾರಿಸುವುದಾಗಿ ತಿಳಿಸಿದರೂ ಈ ರೀತಿ ಪ್ರತಿಭಟಿಸುವುದು ಸರಿಯಲ್ಲ. ಪ್ರಾಂಶುಪಾಲರು ಅನಾರೋಗ್ಯದ ಕಾರಣ ಉಪಪ್ರಾಂಶುಪಾಲರನ್ನು ವಿಚಾರಿಸಲಾಗಿದೆ. ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದರೂ, ಈ ರೀತಿ ಮಾಡುವುದರಿಂದ ಇತರರಿಗೂ ತಮ್ಮ ಅಹವಾಲು ನೀಡಲು ತೊಂದರೆಯಾಗುತ್ತದೆ ಎಂದರು.

ನಮಗೆ ನ್ಯಾಯ ಸಿಗುತ್ತಿಲ್ಲ. ಪ್ರಕರಣ ದಾಖಲಿಸಿ ದಸ್ತಗಿರಿ ಮಾಡುವ ಬದಲು ನಮ್ಮನ್ನೂ ಸತಾಯಿಸಲಾಗುತ್ತಿದೆ ಎಂದು ಎಸ್.ಪಿ. ಆನಂದ್‌ಹೇಳಿದಾಗ , ಹಾಗಿದ್ದರೆ ಸಂಜೆಯದರೂ ಈ ವಿಷಯದಲ್ಲೇ ಮಾತನಾಡೋಣ, ಬೇರೆ ವಿಷಯಗಳ ಚರ್ಚೆ ಬೇಡ ಎಂದು ಡಿಸಿಪಿಯವರೂ ಅಸಮಾಧಾನ ತೋರಿದಾಗ, ಅಲ್ಲಿದ ಇತರ ಪೊಲೀಸ್ ಅಧಿಕಾರಿಗಳು ಆನಂದ್‌ರವರನ್ನು ಸಮಾಧಾನಪಡಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಎಕರೆಗಟ್ಟಲೆ ಡಿಸಿ ಮನ್ನಾ ಭೂಮಿ ಅತಿಕ್ರಮವಾಗುತ್ತಿದ್ದು, ದಲಿತರು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಚಂದ್ರಕುಮಾರ್ ಆಕ್ಷೇಪಿಸಿದರು. ಸಭೆಯಲ್ಲಿ ರವಿಕುಮಾರ್, ಬಾಬು ಮೊದಲಾದವರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News