ದೇರಳಕಟ್ಟೆ: ಯುನಿವೆಫ್ ವತಿಯಿಂದ ಸೀರತ್ ಸಮಾವೇಶ
ದೇರಳಕಟ್ಟೆ: ಯುನಿವೆಫ್ ಕರ್ನಾಟಕ 2024 ರ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ವರೆಗೆ "ಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ನಡೆಯಿತು..
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಿ ಎ ಎಜುಕೇಶನ್ ಟ್ರಸ್ಟ್ ಇದರ ಡೀನ್ ಜನಾಬ್ ಸಯ್ಯದ್ ಅಮೀನ್ ಅಹ್ಮದ್ ರವರು ಮಾತನಾಡಿ "ಕೆಡುಕು ವ್ಯಾಪಕವಾಗಿರುವ ಈ ಜಗತ್ತಿನಲ್ಲಿ ನಾವು ಒಳಿತನ್ನು ಪ್ರಸಾರ ಮಾಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಮುಸ್ಲಿಮರು ಕನ್ನಡಿಯಂತೆ ಪರಸ್ಪರ ತಮ್ಮನ್ನು ಹಾಗೂ ಇತರರನ್ನು ತಿದ್ದುವ ಕೆಲಸ ಮಾಡಬೇಕು ಹಾಗೂ ತಮ್ಮ ಉತ್ತಮ ಚಾರಿತ್ರ್ಯದಿಂದ ಇತರರಿಗೆ ಮಾದರಿಯಾಗಬೇಕು." ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ದಾರ್ಶನಿಕರು, ಸುಧಾರಕರು ಈ ದೇಶಕ್ಕೆ ಬಂದಿರುವುದರಿಂದ ಈ ದೇಶ ಎಂದೂ ಧರ್ಮರಾಹಿತ್ಯವಾಗಿರಲಿಲ್ಲ ಮತ್ತು ಮಾರ್ಗದರ್ಶನದಿಂದ ವಂಚಿತವಾಗಿರಲಿಲ್ಲ. ಎಲ್ಲಾ ವೇದಗ್ರಂಥಗಳೂ ಈ ಜಗತ್ತಿಗೆ ಏಕದೇವ ಸಂದೇಶವನ್ನು ಸಾರಿವೆ. ಕುರ್ ಆನ್ ಅವುಗಳ ಪೈಕಿ ಕೊನೆಯ ಗ್ರಂಥವಾಗಿದೆ. ದೇಶಬಾಂಧವರು ಪ್ರವಾದಿ (ಸ) ಯವರ ಜೀವನವನ್ನು ಅಧ್ಯಯನ ಮಾಡಬೇಕು ಹಾಗೂ ಆ ಮೂಲಕ ನಮ್ಮೊಳಗಿನ ಕಂದರವನ್ನು ನೀಗಿಸಬೇಕು" ಎಂದು ಕರೆ ನೀಡಿದರು.
ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸಿರಾಜ್ ಹಸನ್ ಖಿರಾಅತ್ ಪಠಿಸಿದರು. ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇರಳಕಟ್ಟೆ ಶಾಖೆಯ ಅಧ್ಯಕ್ಷ ಅಬ್ದುರ್‍ರಹ್ಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.