ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿ ಧರಣಿ
ಮಂಗಳೂರು, ಆ.20: ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಪರ್ಯಾಯ ಒಳರಸ್ತೆಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಯಿತು.
ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಗೇಟ್ ಬಳಿಯಲ್ಲಿ ನಡೆದ ಸಾಮೂಹಿಕ ಧರಣಿ ಸತ್ಯಾಗ್ರಹದ ವೇಳೆ ಪಾಂಡೇಶ್ವರದಲ್ಲೂ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಲಾಯಿತು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಹೋರಾಟ ಸಮಿತಿಯ ಗೌರವಾಧ್ಯಕ್ಷ ದಿಲ್ ರಾಜ್ ಆಳ್ವ, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ವಾಗ್ದಾನವಿತ್ತ ರೈಲ್ವೆ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯು, ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದೆ ಜನಸಾಮಾನ್ಯರಿಗೆ ಮೋಸ ಮಾಡಿದೆ. ಸಾಮಾನ್ಯ ಮೇಸ್ತ್ರಿಗೆ ಇರುವಷ್ಟು ಜ್ಞಾನ ಮಂಗಳೂರಿನ ಅಧಿಕಾರಿಗಳಿಗೆ ಇಲ್ಲವಾಗಿದೆ. ರೈಲ್ವೆ ಇಲಾಖೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಸಾಮಾನ್ಯ ಜನತೆಯ ಸಂಕಷ್ಟವನ್ನು ಕೇಳುವವರೇ ಇಲ್ಲವಾಗಿದೆ. ಈ ಮೂಲಕ ರೈಲ್ವೆ ಇಲಾಖೆಯ ಸರ್ವಾಧಿಕಾರಿ ವರ್ತನೆಯನ್ನು ಜನತೆ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಸುನೀಲ್ ಕುಮಾರ್ ಬಜಾಲ್, ಕೂಡಲೇ ಮನಪಾ ಹಾಗೂ ರೈಲ್ವೆ ಇಲಾಖೆ ಸ್ಪಂದಿಸದಿದ್ದಲ್ಲಿ ರೈಲು ರೋಕೋ, ಶಾಸಕರಿಗೆ ಘೆರಾವ್, ಮನಪಾ ಕಚೇರಿಗೆ ಮುತ್ತಿಗೆಯಂತಹ ತೀವ್ರ ರೀತಿಯ ಹೋರಾಟವನ್ನು ನಡೆಸುವುದಾಗಿ ಹೇಳಿದರು.
ಧರಣಿಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಕೆ.ಯಾದವ ಶೆಟ್ಟಿ, ಕಾರ್ಪೊರೇಟರ್ ಅಬ್ದುಲ್ ಲತೀಫ್,ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕಾರ್ಮಿಕ ಮುಖಂಡರಾದ ಜೆ.ಬಾಲಕ್ರಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸೀತಾರಾಮ ಬೇರಿಂಜ, ಸುಕುಮಾರ್ ತೊಕ್ಕೊಟು, ಪ್ರಗತಿಪರ ಚಿಂತಕ ಪ್ರೊ.ಶಿವರಾಮ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷರಾದ ಜೆ ಇಬ್ರಾಹೀಂ ಜೆಪ್ಪು, ಡಿವೈಎಫ್ಐ ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್ ಮಾತನಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಸ್ಥಳೀಯ ಮಸೀದಿಯ ಮುಖಂಡರಾದ ಶರೀಫ್, ಮುಝಂಬಿಲ್, ಅಬ್ದುಲ್ ವಹಾಬ್, ಹೋರಾಟ ಸಮಿತಿಯ ನಾಯಕರಾದ ನಾಗೇಶ್ ಕೋಟ್ಯಾನ್, ಅಸುಂತ ಡಿಸೋಜ, ಭಾರತಿ ಬೋಳಾರ, ಅಶೋಕನ್ ಬೋಳಾರ, ಬಾಬು ಪೂಜಾರಿ, ಕಾರ್ಮಿಕ ಮುಖಂಡರಾದ ಪದ್ಮಾವತಿ ಶೆಟ್ಟಿ, ಜಯಲಕ್ಶ್ಮಿ ಜಪ್ಪಿನಮೊಗರು, ಕರುಣಾಕರ್ ಮಾರಿಪಳ್ಳ, ವಿ.ಕುಕ್ಯಾನ್, ದಿನೇಶ್ ಶೆಟ್ಟಿ, ಉದಯಚಂದ್ರ ರೈ, ಮಹಿಳಾ ಮುಖಂಡರಾದ ಪ್ರಮೀಳಾ ದೇವಾಡಿಗ, ಯೋಗಿತಾ ಉಳ್ಳಾಲ, ಪ್ರಮೋದಿನಿ ಕಲ್ಲಾಪು, ತುಳುನಾಡ ರಕ್ಷಣಾ ವೇದಿಕೆಯ ಜ್ಯೋತಿಕಾ ಜೈನ್, ಪ್ರಶಾಂತ್ ಕಡಬ, ಸುಕೇಶ್ ಉಚ್ಚಿಲ್, ರಿಕ್ಷಾ ಹಾಗೂ ಇತರ ವಾಹನ ಚಾಲಕರ ಸಂಘಟನೆಯ ಮುಖಂಡರಾದ ಮೋಹನ್ ಅತ್ತಾವರ, ಮುಹಮ್ಮದ್ ಅನ್ಸಾರ್, ಅಬ್ದುಲ್ ಖಾದರ್, ಯುವಜನ ನಾಯಕರಾದ ದೀಪಕ್ ಬಜಾಲ್, ರಿಝ್ವಾನ್ ಹರೇಕಳ, ಜಗದೀಶ್ ಬಜಾಲ್, ಜಗತ್ಪಾಲ್ ಕೋಡಿಕಲ್, ಮಾಜಿ ವಿದ್ಯಾರ್ಥಿ ನಾಯಕರಾದ ಯಶು ಕುಮಾರ್, ಮಾಧುರಿ ಬೋಳಾರ, ಮನೀಷ್ ಬೋಳಾರ, ರೈತ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಆದಿವಾಸಿ ಸಂಘಟನೆಯ ಪ್ರಮುಖರಾದ ಕರಿಯ, ಶೇಖರ್ ವಾಮಂಜೂರು, ರಶ್ಮಿ, ದಿನೇಶ್, ಮಾಜಿ ಉಪ ಮೇಯರ್ ಕವಿತಾ ವಾಸು, ದಲಿತ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಪೆನ್ಶನ್ ದಾರರ ಸಂಘಟನೆಯ ನಾಯಕರಾದ ರಿಚರ್ಡ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.