ಹ್ಯಾಕರ್‌ಗಳ ಮೋಸದ ಜಾಲ: ರಿಯಾದ್‌ ಜೈಲಿನಲ್ಲಿ ಸಿಲುಕಿರುವ ಕಡಬದ ಯುವಕ

Update: 2023-08-17 17:50 GMT

ಮಂಗಳೂರು: ವಿದೇಶದಲ್ಲಿ ದುಡಿಯುತ್ತಿರುವ ದ.ಕ. ಜಿಲ್ಲೆಯ ಯುವಕನೋರ್ವ ಹ್ಯಾಕರ್‌ಗಳ ಮೋಸದ ಸುಳಿಗೆ ಸಿಲುಕಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಜೈಲಿನಲ್ಲಿದ್ದಾರೆ.

ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಈ ರೀತಿ ತೊಂದರೆಗೆ ಒಳಗಾಗಿರುವ ಯುವಕ. ಇವರ ತಾಯಿ ಹೇಮಾವತಿ ಮಗನ ಬಿಡುಗಡೆಗಾಗಿ ಸಾಮಾಜಿಕ ಕಾರ್ಯಕರ್ತರ ಮೂಲಕ ಕೇಂದ್ರ ಸರಕಾರ ಹಾಗೂ ವಿದೇಶಾಂಗ ಸಚಿವಾಲಯದ ಕದ ತಟ್ಟುತ್ತಿದ್ದಾರೆ.

ಈ ಬಗ್ಗೆ ಚಂದ್ರಶೇಖರರ ಕುಟುಂಬದ ನಿಕಟವರ್ತಿ, ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಮಂಗಳೂರಿನ ಎನ್‌ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

‘ರಿಯಾದ್‌ನಲ್ಲಿರುವ ಅಲ್ಪಾನರ್ ಸೆರಾಮಿಕ್ಸ್ ಕಂಪೆನಿಯಲ್ಲಿ ದುಡಿಯುತ್ತಿದ್ದ ಚಂದ್ರಶೇಖರ್ ಎಂ.ಕೆ. ಸಿಮ್ ಖರೀದಿಸುವ ಸಂದರ್ಭ ಅಂಗಡಿಯಾತ ಎರಡು ಬಾರಿ ತಂಬ್ ಪಡೆದಿದ್ದು, ಒಂದು ವಾರದ ಬಳಿಕ ಚಂದ್ರಶೇಖರ್‌ರ ಸಿಮ್‌ಗೆ ಅರೆಬಿಕ್ ಭಾಷೆಯಲ್ಲಿ ಸಂದೇಶವೊಂದು ಬರುತ್ತದೆ. ವಿಷಯ ತಿಳಿಯದ ಚಂದ್ರಶೇಖರ್ ಆ ಸಂದೇಶದ ಜೊತೆಗಿನ ಲಿಂಕ್ ಅನ್ನು ಒತ್ತಿ ನೋಡಿದ್ದು, ಎರಡು ದಿನಗಳ ಬಳಿಕ ಅವರ ಹೊಸ ಸಿಮ್‌ನ ನಂಬ್ರಕ್ಕೆ ಕರೆಯೊಂದು ಬರುತ್ತದೆ. ಕರೆ ಮಾಡಿದ ವ್ಯಕ್ತಿಯು ಮೊಬೈಲ್‌ಗೆ ಒಟಿಪಿಯೊಂದು ಬಂದಿದ್ದು, ಅದನ್ನು ತಿಳಿಸುವಂತೆ ಸೂಚಿಸುತ್ತಾರೆ. ಅಮಾಯಕ ಚಂದ್ರಶೇಖರ ಕರೆ ಮಾಡಿದ ವ್ಯಕ್ತಿಯ ಸೂಚನೆಯನ್ನು ಪಾಲಿಸಿದ್ದಾರೆ. ಒಂದು ವಾರದ ಬಳಿಕ ಪೂರ್ವ ಮಾಹಿತಿ ನೀಡದೆ ಆರಕ್ಷಕರು ಆಗಮಿಸಿ ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ’ ಎಂದು ಶ್ರೀಧರ ಗೌಡ ತಿಳಿಸಿದರು.

ಆನಂತರ ಚಂದ್ರಶೇಖರರಿಗೆ ವಿಷಯ ಗೊತ್ತಾಗಿ ಭಾರತೀಯ ಸ್ನೇಹಿತರು ವಿಷಯ ಕಲೆಹಾಕಿದಾಗ ಒಂದು ಸಂಚಿನಲ್ಲಿ ಚಂದ್ರಶೇಖರ್ ಸಿಲುಕಿರುವುದು ದೃಢವಾಗಿದೆ. ಚಂದ್ರಶೇಖರ್‌ರ ಗಮನಕ್ಕೆ ತರದಂತೆ ಅವರ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ಖಾತೆ ತೆರೆಯಲಾಗಿದ್ದು, ಆ ದೇಶದ ಮಹಿಳೆಯೋರ್ವರ 22 ಸಾವಿರ ರಿಯಾಲ್ ಈ ಖಾತೆಗೆ ಜಮೆಯಾಗಿದೆ. ಬಳಿಕ ಈ ಮೊತ್ತ ಇವರ ಖಾತೆಯಿಂದ ಇನ್ನೊಂದು ದೇಶಕ್ಕೆ ವರ್ಗಾವಣೆಯಾಗಿದೆ. ಹಣ ಕಳೆದುಕೊಂಡ ಮಹಿಳೆ ಚಂದ್ರಶೇಖರ್‌ರ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಚಂದ್ರಶೇಖರ್‌ರನ್ನು 2022, ನವೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸ್ನೇಹಿತರು ಈ ಮಾಹಿತಿಯನ್ನು ಚಂದ್ರಶೇಖರ್ ಕುಟುಂಬಕ್ಕೆ ತಿಳಿಸಿದ್ದು, ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಎಂಟು ತಿಂಗಳುಗಳಿಂದ ಕುಟುಂಬದವರು ಆತನನ್ನು ಕ್ಷೇಮವಾಗಿ ಸ್ವದೇಶಕ್ಕೆ ಕರೆತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಸೌದಿ ಸರಕಾರ ಚಂದ್ರಶೇಖರ್‌ನ್ನು ಬಂಧಿಸಿದ್ದೇ ಹೊರತು ಸಮಗ್ರ ತನಿಖೆ ನಡೆಸಿಲ್ಲ. ಆತನ ಖಾತೆಗೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ, ಅಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಕುರಿತು ತನಿಖೆ ನಡೆಸದೆ ಕೇವಲ ಮಹಿಳೆಗೆ ವಂಚನೆಯಾಗಿದೆ ಎಂದಷ್ಟೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.

ಕಾನೂನು ನೆರವು ನೀಡದ ಸಂಸ್ಥೆ: ಅವರಿಗೆ ಸೂಕ್ತ ಭದ್ರತೆ ಮತ್ತು ಕಾನೂನು ನೆರವು ನೀಡಬೇಕಿದ್ದ ಚಂದ್ರೇಖರ್ ಕೆಲಸ ಮಾಡುವ ಅಲ್ಪಾನರ್ ಸೆರಾಮಿಕ್ಸ್ ಸಂಸ್ಥೆ, ಈ ಘಟನೆ ಕುರಿತು ಮನೆಯವರಿಗೆ ಸಂಸ್ಥೆ ಮಾಹಿತಿಯನ್ನೂ ನೀಡಿಲ್ಲ. ಹೀಗಾಗಿ ಸಂಸ್ಥೆಯ ವಿರುದ್ಧ ಕೂಡ ಕಾನೂನು ಸಮರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಆತನ ಸ್ನೇಹಿತರು ಈಗಾಗಲೇ 10 ಲಕ್ಷ ರೂ. ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದಾರೆ. ಆದರೂ ಆತನ ಬಿಡುಗಡೆ ಸಾಧ್ಯವಾಗಿಲ್ಲ. ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಶ್ರೀಧರ ಗೌಡ ವಿವರಿಸಿದರು.

ತಕ್ಷಣಕ್ಕೆ ಮಹಿಳೆ ಕಳೆದು ಕೊಂಡ 22 ಸಾವಿರ ರಿಯಾಲ್ ಪಾವತಿಸಬೇಕು ಮತ್ತು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಚಂದ್ರಶೇಖರ್ ವಿರುದ್ಧ ಅಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ. ಆ.18ರಿಂದ ದ.ಕ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘಸಂಸ್ಥೆ ಪ್ರತಿನಿಧಿಗಳು ಪತ್ರ ಚಳವಳಿ ಮೂಲಕ ಪ್ರಧಾನಿ, ವಿದೇಶಾಂಗ ಸಚಿವರ ಗಮನ ಸೆಳೆಯುವಂತೆ ಶ್ರೀಧರ ಗೌಡ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News