‘4000 ವರ್ಷಗಳಷ್ಟು ಹಳೆಯದ್ದು ಮಂಗಳೂರಿನ ಕಡಲ ವ್ಯಾಪಾರ’ | ಕೆಸಿಸಿಐನಲ್ಲಿ ಬಂದರಿನ ವ್ಯಾಪಾರ ಇತಿಹಾಸದ ಗ್ಯಾಲರಿ ಅನಾವರಣ

Update: 2024-11-11 08:54 GMT

ಮಂಗಳೂರು, ನ. 11: ಬಂದರು ನಗರಿ ಎಂದೇ ಕರೆಯಲ್ಪಡುವ ಮಂಗಳೂರು ನಗರವು ಹೊರ ದೇಶಗಳ ಜತೆಗೆ ಸಮುದ್ರ ಮೂಲಕ ವಹಿವಾಟು, ವ್ಯಾಪಾರ ಸಂಬಂಧದ 4000 ವರ್ಷಗಳ ಹಳೆಯ ಇತಿಹಾಸವನ್ನು ಹೊಂದಿದೆ. ಈ ಕುರಿತು ಬಂದರಿನ ನಗರದ ಕೆಸಿಸಿಐ (ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ)ಯ ಕಚೇರಿಯಲ್ಲಿ ನವೀಕೃತ ಸಭಾಂಗಣದ ಉದ್ಘಾಟನೆ ಹಾಗೂ ‘ಮಂಗಳೂರು ನಗರದ ವ್ಯಾಪಾರ ಇತಿಹಾಸ’ದ ಕುರಿತಂತೆ ಗ್ಯಾಲರಿಯ ಅನಾವರಣ ಕಾರ್ಯಕ್ರಮ ಸೋಮವಾರ ನಡೆಯಿತು.

ಕೆಸಿಸಿಐನ ನಿಕಟಪೂರ್ವ ಅಧ್ಯಕ್ಷ ಅನಂತೇಶ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾಲರಿ ಹಾಗೂ ನವೀಕೃತ ಸಭಾಂಗಣದ ವಾಸ್ತುಶಿಲ್ಪಿ ನಿರೇನ್ ಜೈನ್ ಮಂಗಳೂರಿನ ವ್ಯಾಪಾರ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ಕರಾವಳಿಯು ಅಳುಪರ ಆಳ್ವಿಕೆಯಲ್ಲಿಯೇ ಗುಪ್ತರು, ರೋಮನ್ ಮತ್ತು ವೆನೆಶಿಯನ್ ವ್ಯಾಪಾರಿಗಳನ್ನೊಳಗೊಂಡಂತೆ ದೊಡ್ಡ ರಾಜವಂಶಗಳು ಮತ್ತು ವ್ಯಾಪಾರಿ ರಾಷ್ಟ್ರಗಳಿಂದ ನಾಣ್ಯಗಳ ಚಲಾವಣೆಯ ಪ್ರಭಾವಕ್ಕೊಳಪಟ್ಟಿತ್ತು. 8ನೆ ಶತಮಾನದ ಮಧ್ಯಭಾಗದ ವೇಳೆ ಮಂಗಳೂರಿನಲ್ಲಿ ಅಳುಪ ರಾಜರ ಮುದ್ರೆಗಳನ್ನು ಹೊಂದಿರುವ ನಾಣ್ಯಗಳು ಪತ್ತೆಯಾಗಿದ್ದು, ಇದು ವ್ಯಾಪಾರಕ್ಕಾಗಿ ಆ ಸಮಯದಲ್ಲೇ ಕರೆನ್ಸಿ ಚಲಾವಣೆಯ ಕುರುಹಾಗಿದೆ. ಮಂಗಳೂರು ಕಡಲ ವ್ಯಾಪಾರದ ಇತಿಹಾಸದ ಅಧ್ಯಯನ ನಡೆಸಿರುವ ಇತಿಹಾಸಕಾರರು ಕೂಡಾ ಚೋಳರು, ಗಂಗರು, ಚಾಳುಕ್ಯರು ಮತ್ತು ಹೊಯ್ಸಳರ ನಾಣ್ಯಗಳು ಕೂಡಾ ಮಂಗಳೂರು ಬಂದರು ಪಟ್ಟಣದಲ್ಲಿ ಚಲಾವಣೆಯಲ್ಲಿದ್ದ ಬಗ್ಗೆ ನಂಬುತ್ತಾರೆ. ಈ ಅವಧಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು ಬಹುತೇಕವಾಗಿ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಮಿಶ್ರ ಲೋಹದಿಂದ ಕೂಡಿದ್ದಾಗಿದ್ದು, ಗಧ್ಯಾನ, ಹನ, ತಾರಾ, ವಿಸಾ ಎಂದು ವಿಂಗಡಿಸಲಾಗಿದೆ. ನಾಣ್ಯಗಳ ಒಂದು ಮುಖ ದೇವರು, ಧಾರ್ಮಿಕ ಚಿಹ್ನೆಗಳು ಅಥವಾ ರಾಜಮನೆತದದಿಂದ ಪೂಜಿಸಲ್ಪಟ್ಟ ಪ್ರಾಣಿಗಳ ಚಿತ್ರವನ್ನು ಹೊಂದಿದ್ದರೆ, ಇನ್ನೊಂದು ಬದಿಯಲ್ಲಿ ಆ ಕಾಲದ ಅರಸರು ಮತ್ತು ದಿನಾಂಕಗಳ ಮುದ್ರಣದಿಂದ ಕೂಡಿವೆ. ನವ ಮಂಗಳೂರು ಬಂದರಿನ ಉತ್ಖನನದ ವೇಳೆ ದೊರಕಿದ ವಿಜಯನಗರ ಸಾಮ್ರಾಜ್ಯದ ಚಿನ್ನದ ವರಾಹವನ್ನು ಒಳಗೊಂಡ 270 ನಾಣ್ಯಗಳು ಬಂದರು ನಗರಿಯ ಮಹತ್ವವನ್ನು ವಿವರಿಸುತ್ತವೆ ಎಂದು ನಿರೇನ್ ಜೈನ್‌ ರವರು ಕಾರ್ಕಳದ ಮಂಡಕೆರೆ ನಿತ್ಯಾನಂದ ಪೈ ಅವರ ಸಂಶೋಧನಾ ಮೂಲವನ್ನು ಉಲ್ಲೇಖಿಸಿ ವಿವರ ನೀಡಿದರು.

AD 400 ರಲ್ಲಿ ಸೆಟ್ಟಿಕಾರ ಎಂದು ಕರೆಲ್ಪಡುತ್ತಿದ್ದ ಜೈನ ವ್ಯಾಪಾರಿಗಳು ಬಂದರು ನಗರಿ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಮಾತ್ರವೇ ಆ ಅವಧಿಯಲ್ಲಿ ಇಸ್ಲಾಮಿಕ್ ಪೂರ್ವ ಅರಬರು ಮತ್ತು ಪರ್ಶಿಯನ್ನರ ಜತೆ ವ್ಯಾಪಾರ ನಡೆಸುತ್ತಿದ್ದ ಮಂಗಳೂರಿನ ತುಳು ಮಾತನಾಡುವ ವ್ಯಾಪಾರ ಸಮುದಾಯದವರೆಂದು ಹೇಳಲಾಗಿದೆ. ಕೆಸಿಸಿಐ ಕಚೇರಿಯ ಸಭಾಂಗಣದ ಗ್ಯಾಲರಿಯಲ್ಲಿ ಈ ಎಲ್ಲಾ ಮಾಹಿತಿಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ. ತುಳುನಾಡಿನ ವ್ಯಾಪಾರ ವೈಭವವನ್ನು ಶಾಶ್ವತಾಗಿರಿಸುವ ನಿಟ್ಟಿನಲ್ಲಿ ಗ್ಯಾಲರಿಯನ್ನು ರಚನೆ ಮಾಡಲಾಗಿದ್ದು, ಕೆಸಿಸಿಐಯ ನಿಕಟಪೂರ್ವ ಹಾಗೂ ಹಾಲಿ ಪದಾಧಿಕಾರಿಗಳು ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಅನಂತೇಶ್ ಪ್ರಭು ಮಾತನಾಡಿ, ಸಭಾಂಗಣವು ಹೊಸ ಅವಿಷ್ಕಾರ ಮತ್ತು ಉದ್ಯಮಶೀಲತೆಯ ದ್ಯೋತಕವಾಗಿ ರೂಪುಗೊಂಡಿದ್ದು, ನಮ್ಮ ಮಂಗಳೂರಿನ ವ್ಯಾಪಾರ ಇತಿಹಾಸದ ಗತ ವೈಭವವನ್ನು ಪ್ರಸ್ತುತಪಡಿಸುವಲ್ಲಿ ಸಾಕ್ಷಿಯಾಗಿದೆ ಎಂದರು.

ಅಧ್ಯಕ್ಷ ಆನಂದ್ ಜಿ. ಪೈ ಮಾತನಾಡಿ, ನವೀಕೃತ ಸಭಾಂಗಣವನ್ನು ಕೆಸಿಸಿಐನ ಪದಾಧಿಕಾರಿಗಳು ಹಾಗೂ ಸದಸ್ಯರು ತಮ್ಮ ಕಾರ್ಯಗಳಿಗೆ ಬಳಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕೆಸಿಸಿಐ ಉಪಾಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್, ಗೌರವ ಕಾರ್ಯದರ್ಶಿ ಅಶ್ವಿನ್ ಪೈ ಮರೂರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಆದಿತ್ಯ ಪದ್ಮನಾಭ ಪೈ ವಂದಿಸಿದರು.


Delete Edit

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News