ಸ್ಮಾರ್ಟ್ ಸಿಟಿ ‘ವಾಟರ್ ಫ್ರಂಟ್’ ಯೋಜನೆಗೆ ಚುರುಕು ನೀಡಿ: ನಳಿನ್ ಕುಮಾರ್
ಮಂಗಳೂರು, ಅ.17 ಮಂಗಳೂರು ಸ್ಮಾರ್ಟ್‌ಸಿಟಿಯ ವಾಟರ್ ಫ್ರಂಟ್(ಜಲಾಭಿಮುಖಿ) ಯೋಜನೆಗಳಿಗೆ ಚುರುಕು ನೀಡುವ ನಿಟ್ಟಿನಲ್ಲಿ ಮೆರಿಟೈಂ ಮಂಡಳಿಯ ಅಧಿಕಾರಿಗಳು ತಕ್ಷಣ ಯೋಜನಾ ಪ್ರದೇಶದಲ್ಲಿ ಲೀಸ್ ಮುಕ್ತಾಯಗೊಂಡ 19 ಆಸ್ತಿಗಳ ಪಟ್ಟಿ ಹಾಗೂ ಸ್ಮಾರ್ಟ್ ಸಿಟಿ ಕೆಲಸ ನಡೆಸುವ ಬಗ್ಗೆ ಪತ್ರ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಗಳಿಗೆ ವೇಗ ನೀಡುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಾಮಗಾರಿಗಳಿಗೆ ವೇಗ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಸಲ್ಲದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ್ ಕೆ. ಮಾತನಾಡಿ ಬಂದರು ಇಲಾಖೆಗೆ ಸೇರಿದ ನದಿ ದಡದ ಜಮೀನನ್ನು ವಾರ್ಷಿಕ ಲೀಸ್ ಆಧಾರದಲ್ಲಷ್ಟೇ ನೀಡಲಾಗಿತ್ತು, ಅವುಗಳೆಲ್ಲವೂ ಅವಧಿ ಪೂರ್ಣಗೊಳಿಸಿವೆ. ಆದರೆ ಅದರಲ್ಲೊಬ್ಬ ವ್ಯಕ್ತಿ ತಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿರುವುದಾಗಿ ಆರೋಪಿಸಿ ಜಿಲ್ಲಾಧಿಕಾರಿಯನ್ನೇ ಪಾರ್ಟಿ ಮಾಡಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ಕಾಮಗಾರಿಗೆ ಅಡ್ಡಿಯಾಗಬಹುದು ಎಂದರು.
ಮೆರಿಟೈಂ ಮಂಡಳಿಯ ಅಧಿಕಾರಿಗಳು ಇದರ ಬಗ್ಗೆ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಸ್ಮಾರ್ಟ್‌ಸಿಟಿ ಅಧಿಕಾರಿಗಳು ಪೊಲೀಸ್ ಇಲಾಖೆಯ ನೆರವು ಪಡೆದುಕೊಂಡು ಕೆಲಸ ಮುಂದುವರಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಶಾಸಕ ವೇದವ್ಯಾಸ ಕಾಮತ್ ಬಂದರು ಇಲಾಖೆಗೆ ಕನಿಷ್ಠ ಜುಜುಬಿ ಮೊತ್ತವನ್ನು ನೀಡಿ ಈ ಜಾಗವನ್ನು ಬರ್ತ್‌ಡೇ ಪಾರ್ಟಿಗಳಿಗೆ ನೀಡಿ ಭರ್ಜರಿಯಾಗಿ ಹಣ ಮಾಡುವವರು ಇಲ್ಲಿದ್ದಾರೆ ಎಂದು ಆರೋಪಿಸಿದರು.
ಕರಾವಳಿ ಸರ್ಕಲ್-ಪಂಪ್‌ವೆಲ್ ರಸ್ತೆ ಕೆಲಸವೂ ಬಾಕಿ ಇದೆ. ಅದನ್ನು ತ್ವರಿತಗೊಳಿಸಬೇಕು ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದರು.
*ಪಡೀಲ್-ಪಂಪ್‌ವೆಲ್ ಚತುಷ್ಪಥ ಕಾಮಗಾರಿಯನ್ನು ಪೂರ್ಣಗೊಳಿಸಲು ಗೈಲ್ ಪೈಪ್‌ಲೈನ್‌ನವರಿಂದ ತಡೆಯುಂಟಾಗು ತ್ತಿದೆ. ಜಲಸಿರಿಯವರ ಪೈಪ್‌ಲೈನ್ ಕೆಲಸವೂ ಅಡ್ಡಿಯಾಗುತ್ತಿದೆ. ಇದೆಲ್ಲವನ್ನೂ ಸಮರ್ಪಕವಾಗಿ ಮಾತುಕತೆ ನಡೆಸಿ ಕೊಂಡು ಜನವರಿ 25ರೊಳಗೆ ಪೂರ್ಣಗೊಳಿಸಬೇಕು ಎಂದು ನಳಿನ್ ಸೂಚಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮೀನುಗಾರಿಕಾ ಕಾಲೇಜಿಗೆ 2.35 ಕೋ.ರೂ. ಅನುದಾನ ಸ್ಮಾರ್ಟ್ ಸಿಟಿಯಡಿ ನೀಡಿದ್ದರೂ ಅದರ ಸದ್ವಿನಿಯೋಗ ಮಾಡುತ್ತಿಲ್ಲ ಎಂದರು. ಸಭೆಯಲ್ಲಿ ಮನಪಾ ಆಯುಕ್ತ ಆನಂದ್ ಸಿ.ಎಲ್. ಮತ್ತಿತರರು ಉಪಸ್ಥಿತರಿದ್ದರು.