ಸೆ.3ರಂದು ಸ್ವರ್ಣ ಸಂಭ್ರಮ ಕಾರ್ಯಕ್ರಮ
ಮಂಗಳೂರು, ಆ.31: ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಇದರ 'ಸ್ವರ್ಣ ಸಂಭ್ರಮ' ಕಾರ್ಯಕ್ರಮ ಸೆ.3ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಆನಂದ ಕೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೂರ್ವಾಹ್ನ 10 ಗಂಟೆಗೆ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಆರ್.ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸುವರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಐವನ್ ಡಿಸೋಜ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.
ದ.ಕ.ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ನಲ್ಲಿ ಸುಮಾರು 2 ಸಾವಿರ ಸದಸ್ಯರಿದ್ದು, ಅವರು ಕುಟುಂಬ ಸಮೇತರಾಗಿ ಈ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಅಪರಾಹ್ನ 2.30ರಿಂದ 4.30ರವರೆಗೆ ಸಂಘದ ಪ್ರತಿಭಾವಂತ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ರಿಂದ 6 ಗಂಟೆಯವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಅಸೋಸಿಯೇಷನ್ನ ಗೌರವಾಧ್ಯಕ್ಷ ಎಂ.ದಿನೇಶ್ ಕುಂಪಲ ವಹಿಸುವರು. 6 ಗಂಟೆಯ ಬಳಿಕ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ 'ತೆಲಿಕೆದ ಗೊಂಚಿಲ್' ವೈವಿಧ್ಯಮಯ ಹಾಸ್ಯ ಕಾರ್ಯಕ್ರಮ ಜರಗಲಿದೆ ಎಂದು ಆನಂದ ಕೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಎಂ, ಉಪಾಧ್ಯಕ್ಷ ಹರೀಶ್ ಶೆಟ್ಟಿ ಕುತ್ತಾರು, ಸಹ ಕಾರ್ಯದರ್ಶಿ ಶುಭಕರ ಶೆಟ್ಟಿ, ಸಹ ಸಂಘಟನಾ ಕಾರ್ಯದರ್ಶಿ ಸಂಜಯ್ ಕೋಟ್ಯಾನ್ ಎಕ್ಕೂರು, ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕರುಣಾಕರ ಕೆ ಉಪಸ್ಥಿತರಿದ್ದರು.