'ಮೀಫ್' ಸಂಸ್ಥೆಗೆ ಸರಕಾರಿ ಜಮೀನು: ಸ್ಪೀಕರ್ ಯು.ಟಿ. ಖಾದರ್

Update: 2024-09-18 13:31 GMT

ಮಂಗಳೂರು: ಮಾಜಿ ಸಚಿವ ಬಿ.ಎ.ಮೊಯ್ದಿನ್ ಅವರಂತಹ ಹಿರಿಯರ ತ್ಯಾಗದ ಫಲದಿಂದ ಇಂದು ಮೀಫ್‌ಗೆ ರಾಜ್ಯದಲ್ಲೇ ಒಳ್ಳೆಯ ಸ್ಥಾನಮಾನವಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೀಫ್ ನಾಡಿಗೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಈ ಸಂಸ್ಥೆ ಯನ್ನು ಮುನ್ನೆಡೆಸುವ ಜವಾಬ್ದಾರಿ ಯುವ ಸಮೂಹದ್ದಾಗಿದೆ. ಮೀಫ್ ಸಂಸ್ಥೆಯು ಮತ್ತಷ್ಟು ಪ್ರಗತಿ ಸಾಧಿಸಲು ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಕಟ್ಟಡ ನಿರ್ಮಿಸಲು ಜಮೀನು ಬೇಕು. ಹಾಗಾಗಿ ನಗರದಿಂದ ಹೊರತುಪಡಿಸಿದ ಪ್ರದೇಶದಲ್ಲಿ ಸರಕಾರಿ ಜಮೀನಿಗೆ ಅರ್ಜಿ ಸಲ್ಲಿಸಿದರೆ ಅದನ್ನು ಮಂಜೂರು ಮಾಡಿಸಲಾಗುವುದು ಎಂದು ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.


ನಗರದ ಬಾವುಟಗುಡ್ಡೆಯಲ್ಲಿರುವ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್ (ಮೀಫ್) ಇದರ ನವೀಕೃತ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೀಫ್ ಕಾರ್ಯಾಲಯವು ಭವಿಷ್ಯದಲ್ಲಿ ಸಮಾಜ ಮತ್ತು ಸಮಯದಾಯದ ಅಭಿವೃದ್ಧಿಗೆ ಹಾಕಲಾದ ತಾಣವಾಗಿದೆ. ಮೀಫ್‌ಗೆ ಸರಕಾರದಿಂದ ಸಿಗಬಹುದಾದ ಕಾನೂನು ಬದ್ಧ ಆವಶ್ಯಕತೆಯನ್ನು ಪೂರೈಸಲು ತಾನು ಬದ್ಧವಾಗಿದ್ದೇನೆ. ಸರಕಾರ ಮತ್ತು ಮೀಫ್ ಮಧ್ಯೆ ತಾನು ಸೇತುವೆಯಾಗಿ ಸದಾ ಕೆಲಸ ಮಾಡುವೆ ಎಂದು ಯು.ಟಿ.ಖಾದರ್ ಹೇಳಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಅವರನ್ನು ಸನ್ಮಾನಿಸಲಾಯಿತು.

ದಿಕ್ಸೂಚಿ ಭಾಷಣಗೈದ ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಮಾತನಾಡಿ ಕೆಲವು ವರ್ಷಗಳ ಹಿಂದೆ ಶೈಕ್ಷಣಿಕವಾಗಿ ತೀರಾ ಹಿಂದುಳಿದ್ದ ಬ್ಯಾರಿ ಮುಸ್ಲಿಮರು ಇಂದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಅದಕ್ಕೆ ಶ್ರಮಿಸಿದ್ದ ಮಾಜಿ ಸಚಿವ ಬಿ.ಎ.ಮೊಯ್ದಿನ್ ಮತ್ತು ಖಾದರ್ ಕುಕ್ಕಾಡಿ ಹಾಗೂ ಎಡಪದವು ಮುಹಮ್ಮದ್ ಬ್ಯಾರಿ ಕೂಡ ಇಂದು ನಮ್ಮೊಂದಿಗಿಲ್ಲ. ಈ ಹಿರಿಯರ ಪ್ರಯತ್ನದಿಂದಾಗಿ ಬ್ಯಾರಿ ಮುಸ್ಲಿಮರ ಶೈಕ್ಷಣಿಕ ಹಸಿವು ನೀಗಿದೆ ಎನ್ನಬಹುದು. ಮೀಫ್ ಈಗ ಕೇವಲ ಶಿಕ್ಷಣ ಕೇಂದ್ರವಾಗಿ ಉಳಿದಿಲ್ಲ, ಸಾಮಾಜಿಕವಾಗಿ ಸಾಮರಸ್ಯ ಬಿತ್ತುವ ಕೇಂದ್ರವೂ ಆಗಿವೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಮೀಫ್ ಗೌರವ ಸಲಹೆಗಾರ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ ಒಕ್ಕೂಟ ವ್ಯವಸ್ಥೆಯಲ್ಲಿ ವ್ಯಕ್ತಿ ಕೇಂದ್ರಿತಕ್ಕೆ ಅವಕಾಶವಿಲ್ಲ. ಸಮಾಜದ, ಸಮುದಾಯದ ಹಿತವಷ್ಟೇ ಮುಖ್ಯವಾಗಿದೆ. ಮೀಫ್ ಈ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಇಲ್ಲಿ ತಂಡವಾಗಿ ಕೆಲಸ ಮಾಡಿದ ಕಾರಣ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೆನೆಪೊಯ ಪರಿಗಣಿತ ವಿವಿ ಕುಲಾಧಿಪತಿ ಡಾ.ವೈ. ಅಬ್ದುಲ್ಲ ಕುಂಞಿ, ಕಾರ್ಪೊರೇಟರ್ ಎ.ಸಿ. ವಿನಯರಾಜ್, ಎಸ್‌ಎಂಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಆಝಾದ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಅಝಾದ್, ಭಾರತ್ ಕನ್‌ಸ್ಟ್ರಕ್ಷನ್ಸ್‌ನ ಸಿಇಒ ಎಸ್.ಎಂ.ಮುಸ್ತಫ ಮಾತನಾಡಿದರು.


ವೇದಿಕೆಯಲ್ಲಿ ಮೀಫ್ ಪದಾಧಿಕಾರಿಗಳಾದ ರಿಯಾಝ್ ಅಹ್ಮದ್ ಕಣ್ಣೂರು, ಮುಸ್ತಫಾ ಸುಳ್ಯ, ಶಬಿ ಅಹ್ಮದ್ ಖಾಝಿ, ನಿಸಾರ್ ಫಕೀರ್ ಮುಹಮ್ಮದ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಸ್ವಾಗತಿಸಿದರು.ಉಪಾಧ್ಯಕ್ಷ ಮುಮ್ತಾಝ್ ಅಲಿ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News