ಸುಳ್ಯ | ಅಂಚೆಯಣ್ಣ ಜಬ್ಬಾರ್ ಅಗಲಿಕೆಗೆ ಮಿಡಿಯಿತು ನೂರಾರು ಹೃದಯಗಳು

Update: 2024-09-28 15:13 GMT

ಸುಳ್ಯ: ಕೆಲವು ವರ್ಷಗಳ ಹಿಂದೆ ಊರಿನ ಸುದ್ದಿ ಹೊತ್ತು ತರುವ ವ್ಯಕ್ತಿ, ಪ್ರತೀ ದಿನ ಅಂಚೆ ಅಣ್ಣ ಸೈಕಲ್ನಲ್ಲಿ ಹೊತ್ತು ತರುವ ಸುದ್ದಿಗಾಗಿಯೇ ತುದಿಗಾಲಲ್ಲಿ ನಿಂತಿರುತ್ತಿದ್ದರು. ಅಂಚೆಯಣ್ಣನೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯುತ್ತಿದ್ದವು. ಆದರೆ ಆಧುನಿಕ ಉಪಕರಣಗಳು ಬಂದಮೇಲೆ ಸುದ್ದಿ ತರುವ ಅಂಚೆ ಅಣ್ಣನ ಅಸ್ತಿತ್ವದ ಪ್ರಾಮುಖ್ಯ ಕಡಿಮೆಯಾಗಿ, ಈಗಿನ ಪೀಳಿಗೆ ಯವರಲ್ಲಿ ಅಂಚೆಯಣ್ಣನೊಂದಿಗಿನ ಸಂಪರ್ಕ ಬಹಳ ಕಡಿಮೆ. ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದ ಘಟನೆಯೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶ ಕೊಲ್ಲಮೊಗ್ರುವಿನ ಅಂಚೆ ವಿತರಕರಾಗಿದ್ದ ಅಬ್ದುಲ್ ಜಬ್ಬಾರ್ ಊರಿನ ಪ್ರೀತಿಗೆ ಪಾತ್ರರಾಗಿದ್ದರು. ಕರ್ತವ್ಯದಲ್ಲಿರುವ ಸಂದರ್ಭ ನಿಧನರಾದ ಅವರ ಆಗಲಿಕೆ ಊರವರಿಗೆ ಸಹಿಸಲು ಅಸಾಧ್ಯವಾಯಿತು. ಜತೆಗೆ ಮನೆಯವರಿಗೂ ದುಡಿಯವ ಆಧಾರಸ್ತಂಭ ಕಳಚಿ ಬಿದ್ದಾಗ ದಿಕ್ಕೇ ತೋಚದಂತಾಯಿತು. ಮನೆಯವರ ಸಂಕಷ್ಟಕ್ಕೆ ಮರುಗಿದ ಊರವರು ತಮ್ಮ ಕೈಲಾದ ಸಹಾಯವನ್ನು ತಮ್ಮೂರಿನ ಅಂಚೆಯಣ್ಣನ ಕುಟುಂಬಕ್ಕೆ ನೀಡಿದ್ದಾರೆ.

ಅಂಚೆ ವಿತರಕರಾಗಿದ್ದ ಅಬ್ದುಲ್ ಜಬ್ಬಾರ್ ಅವರು ಮೂಲತಃ ಸುಳ್ಯದ ಜಾಲ್ಲೂರಿನ ಆಡ್ಕಾರಿ ವರು ಕಳೆದ ಸುಮಾರು 32 ವರ್ಷಗಳಿಂದ ಕೊಲ್ಲ ಮೊಗ್ರುವಿನಲ್ಲಿ ಅಂಚೆ ವಿತರಕರಾಗಿ ತನ್ನಪ್ರಾಮಾಣಿಕ ಸೇವೆಯಿಂದ ಕೊಲ್ಲಮೊಗ್ರು ಹಾಗೂ ಆಸುಪಾಸಿನ ಊರಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಜಬ್ಬಾರ್ ಅವರು ಕೊಲ್ಲಮೊಗ್ಗುವಿನ ಚಾಳೆಪ್ಪಾಡಿ (ತಂಬನಡ್ಕ) ಎಂಬಲ್ಲಿ ನೆಲೆಸಿದ್ದರು. ಆದರೆ ದುರದೃಷ್ಟವಶಾತ್ ಆ.13ರಂದು ಅಬ್ದುಲ್ ಜಬ್ಬಾರ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು.

ಜಬ್ಬಾರ್ ಅವರ ನಿಧನದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮನೆಯವರಿಗೆ ದಿಕ್ಕೇ ತೋಚದಂತಾಗಿತ್ತು. ಮನೆಯವರ ಸಂಕಷ್ಟವನ್ನು ಅರಿತ ಕೊಲ್ಲಮೊಗುವಿನ ಜನತೆ ಮಾನವೀಯ ನೆಲೆಯಲ್ಲಿ ಅವರಿಗೆ ಆರ್ಥಿಕ ನೆರವನ್ನು ನೀಡುವ ಬಗ್ಗೆ ಸಮಾ ಲೋಚನೆ ನಡೆಸಿದರು. ಅದರಂತೆ ದಾನಿಗಳು, ಸಹೃದಿಯಿಗಳನ್ನು ಸಂಪರ್ಕಿಸಿ ಜಬ್ಬಾರ್ ಕುಟುಂಬಕ್ಕೆ ನೀಡಲು ಹಣ ಸಂಗ್ರಹಿಸಿದರು. ಅದರಂತೆ ಊರವರ, ದಾನಿಗಳ ಸಹಕಾರದಿಂದ ಸುಮಾರು ರೂ.1,23,650 ಸಂಗ್ರಹಗೊಂಡಿದ್ದು ಅದನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.

ಶ್ರೀಧರ್ ನಾಯರ್, ಶೇಖರ್ ಅಂಬೆಕಲ್ಲು ಸಚಿತ್ ಶಿವಾಲ, ಹೇಮಲತಾ ಎಸ್.ಕೊಮ್ಮೆಮನೆ, ದಿನೆನ್ ಕುಮಾರ್ ಮುಡ್ತಿಲ, ಅನಂತರಾಮ ಮಣಿಯಾನ ಮನೆ ಮೊದಲಾದವರ ನೇತೃತ್ವದಲ್ಲಿ ಹಣ ಸಂಗ್ರಹಿಸಲಾಗಿದೆ. ಹಣ ಹಸ್ತಾಂತರ ಸಂದರ್ಭ ದಲ್ಲಿ ಜಬ್ಬಾರ್ ಮನೆಯವರು ಹಾಗೂ ಊರವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News