ಬಂಟ್ವಾಳ ತಾಲೂಕಾಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಬಂಟ್ವಾಳ ತಾಲೂಕಾಡಳಿತದ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ಸ್ವಾತಂತ್ರೋತ್ಸವವನ್ನು ತಾಲೂಕಾಡಳಿತ ಸೌಧದಲ್ಲಿ ಮಂಗಳವಾರ ಆಚರಿಸಲಾಯಿತು.
ತಹಶೀಲ್ದಾರ್ ಎಸ್.ಬಿ. ಕೂಡಲಗಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್ ಗೃಹರಕ್ಷಕದಳ, ಎನ್‌ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆದು ಅತಿಥಿಗಳು ಗೌರವವಂದನೆ ಸ್ವೀಕರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯಕ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಹಳ್ಳಿಗಳು ಸ್ವಾವಲಂಭಿಯಾದಾಗ ಸ್ವಾವಲಂಭಿ ಭಾರತ ನಿರ್ಮಾಣವಾಗಲು ಸಾಧ್ಯವಿದೆ. ಗ್ರಾಮ ಗ್ರಾಮಗಳಲ್ಲಿ ಜನರ ಸ್ವಾವಲಂಬಿ ಬದುಕಿಗೆ ಪೂರಕವಾಗು ವಂತಹ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಸಕರಾತ್ಮಕ ವಿಚಾರಗಳಿಗೆ ಹೆಚ್ಚು ಒತ್ತು ನೀಡಿದಾಗ ಕೆಟ್ಟ ವಿಚಾರಗಳು ತನ್ನಿಂದ ತಾನೆ ದೂರವಾಗುತ್ತದೆ. ಕೊರೋನಾ ಪರಿಸ್ಥಿತಿಯನ್ನು ಭಾರತ ಅತ್ಯುತ್ತಮವಾಗಿ ನಿಭಾಯಿಸಿದ್ದು ಕೊರೋನತ್ತರ ಕಾಲಘಟದಲ್ಲೂ ಭಾರತ ಜಗತ್ತಿನ ಬಲಿಷ್ಠ ರಾಷ್ಟವಾಗಿ ಮುನ್ನಡೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಕಾಣುತ್ತಿದ್ದು ಹೀಗೆಯೇ ಮುಂದುವರಿದ್ದಲ್ಲಿ ಜಗತ್ತಿನ ಮೊದಲ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ತಿಳಿಸಿದರು.
ತುಂಬೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಪ್ರಧಾನ ಭಾಷಣ ಮಾಡಿ ಸ್ವಾತಂತ್ರ್ಯ ಬಳಿಕ ದೇಶ ಪ್ರಜಾಪ್ರಭುತ್ವ ರಾಷ್ಟವಾಗಿದ್ದು ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ್ಯ ಸಿಕ್ಕಿದೆ. ರಾಷ್ಟ್ರ ಪ್ರೇಮದ ಉತ್ಕಟ ಕಿಚ್ಚು ನಮ್ಮ ಹಿರಿಯರ ರಕ್ತದ ಕಣ ಕಣದಲ್ಲೂ ಇತ್ತು ಎಂದು ತಿಳಿಸಿದರು. ನಮ್ಮ ನಡೆ ನುಡಿ ಆದರ್ಶವಾಗಬೇಕು, ದೇಶ ಪ್ರೇಮವನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಬೇಕು. ಪತಾಕೆ ಹಾರಿಸಿದರೆ ಮಾತ್ರ ಅದು ರಾಷ್ಟ ಪ್ರೇಮವಲ್ಲ, ನಮ್ಮ ನಡೆ ನುಡಿಗಳನ್ನು, ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅದು ರಾಷ್ಟ್ರಪ್ರೇಮವಾಗಲಿದೆ ಎಂದರು.
ತಹಶೀಲ್ದಾರ್ ಎಸ್. ಬಿ. ಕೂಡಲಗಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದವರನ್ನು ನೆನೆಪಿಸುವ ದಿನ ಇದಾಗಿದೆ. ಭಾರತ ವಿಜ್ಞಾನ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ತೋಟಗಾರಿಕಾ ಇಲಾಖೆಯ ವತಿಯಿಂದ ತಾಳೆಬೆಳೆ ನಾಟಿ ಅಭಿಯಾನಕ್ಕೆ ಶಾಸಕ ರಾಜೇಶ್ ನಾಕ್ ಚಾಲನೆ ನೀಡಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ಸ್ವಾಗತಿಸಿದರು. ತಾ.ಪಂ. ಪ್ರಭಾರ ಕಾರ್ಯ ನಿರ್ವಾಹ ಣಾಧಿಕಾರಿ ದಿನೇಶ್ ವಂದಿಸಿದರು. ಕಂದಾಯ ನಿರೀಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.