ಕಡಬ | ಸರಕಾರಿ ಜಮೀನಿನಲ್ಲಿದ್ದ ಮನೆ ಕೆಡವಿದ ಕಂದಾಯ ಅಧಿಕಾರಿಗಳು: ಬೀದಿಪಾಲಾದ ವೃದ್ಧ ದಂಪತಿ

Update: 2024-11-13 10:02 GMT

ಕಡಬ, ನ.13: ಸರಕಾರಿ ಜಾಗದಲ್ಲಿ ನಿರ್ಮಿಸಿದ ಕಾರಣಕ್ಕೆ ವೃದ್ಧ ದಂಪತಿ ಆರು ವರ್ಷಗಳಿಂದ ವಾಸವಿದ್ದ ಮನೆಯನ್ನು ತಾಲೂಕು ಕಂದಾಯ ಅಧಿಕಾರಿಗಳು ನೆಲಸಮಗೊಳಿಸಿದ ಘಟನೆ ತಾಲೂಕಿನ ಕೌಕ್ರಾಡಿ ಎಂಬಲ್ಲಿ ಇಂದು ನಡೆದಿದೆ.

ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ವಾಸವಿದ್ದ ಮನೆಯನ್ನು ಬುಧವಾರ ಏಕಾಏಕಿ ಧ್ವಂಸಗೊಳಿಸಲಾಗಿದೆ.

ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿ ನಿವಾಸಿಗಳಾಗಿದ್ದ ಈ ದಂಪತಿ ಕೂಲಿ ಕೆಲಸಕ್ಕಾಗಿ ಕರಾವಳಿಗೆ ಆಗಮಿಸಿದವರು ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದರು. ದಂಪತಿಗೆ ಯಾವುದೇ ಪಿತ್ರಾರ್ಜಿತ ಆಸ್ತಿ ಇರಲಿಲ್ಲ. ಹೀಗಾಗಿ ಕಾಪಿನಬಾಗಿಲು ಎಂಬಲ್ಲಿನ ಸರಕಾರಿ ಜಾಗದಲ್ಲಿ ಸಣ್ಣ ಮನೆ ಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.

ಈ ದಂಪತಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿರುವ ಕಾರಣ ಇದರ ವಿರುದ್ಧ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎಂಬವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರಿ ಜಾಗ ತೆರವುಗೊಳಿಸಲು ಹೈಕೋರ್ಟ್ ಸೂಚನೆ ನೀಡಿದ್ದರಿಂದ ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಕೆಡವದೆ ವಾಪಸ್ಸಾಗಿದ್ದರು. ಇಂದು ದಿಢೀರ್ ಆಗಮಿಸಿದ ಅಧಿಕಾರಿಗಳು ಜೇಸಿಬಿ ಯಂತ್ರದ ಬಳಸಿ ಮನೆಯ ಸಾಮಗ್ರಿಗಳನ್ನೆಲ್ಲ ಹೊರಗಿಟ್ಟು ಮನೆಯನ್ನು ಕೆಡವಿ ಹಾಕಿದ್ದಾರೆ.

ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದೆ.

 

 Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News