ಮಂಗಳೂರು| ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣ: ವಿದೇಶಿ ಪ್ರಜೆ ಸೇರಿ 6 ಮಂದಿ ಆರೋಪಿಗಳ ಬಂಧನ

Update: 2024-10-28 13:42 GMT

ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪದಲ್ಲಿ ಆರು ಮಂದಿಯನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ, ಬಂಧಿತರಿಂದ ಮಾದಕ ವಸ್ತುಗಳನ್ನು ಮತ್ತು ಸಾಗಾಟಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಂಡಿರುವ ಘಟನೆ ರವಿವಾರ ವರದಿಯಾಗಿದೆ.

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಒಸಿಎಲ್ ಹಿಂಭಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಪಣಂಬೂರು ಠಾಣಾ ಪಿಎಸ್‌ಐ ಶ್ರೀಕಲಾ ಕೆ.ಟಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳಾದ ಚಂದನ್ ಮತ್ತು ಶರತ್ ಮತ್ತು ಮಾದಕ ವಸ್ತು ಮಾರಾಟ ಮಾಡಲು ಸಹಕರಿಸಿದ ಇತರ ಆರೋಪಿಗಳಾದ ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ನೈಜಿರಿಯಾದ ಪ್ರಜೆ ಮೈಕಲ್‌ ಬಾಲಾಜಿ ಮತ್ತು ಮುಖೇಶ್‌ ಕುಮಾರ್ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಲ್ಲಿದ್ದ 11 ಗ್ರಾಮ್ ಕೋಕೇನ್ ಮತ್ತು 30 ಗ್ರಾಂ ತೂಕದ ಎಂಡಿಎಂಎ , ಸ್ಕೂಟರ್ ಮತ್ತು 9 ಮೊಬೈಲ್‌ಗಳನ್ನು ವಶಪಡಿಸಿಕೊಂಡರು. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 91,000 ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ 5 ಮಂದಿ ಮಂಗಳೂರಿನ ನಿವಾಸಿಗಳಾಗಿದ್ದು, ಒಬ್ಬ ಆರೋಪಿ ನೈಜೀರಿಯಾ ದೇಶದವನಾಗಿರುತ್ತಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಕೆಲಸ ಮಾಡಿಕೊಂಡಿರುವುದಾಗಿದೆ  ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್  ಮಾರ್ಗದರ್ಶನಂದಂತೆ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನ‌ ದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮುಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕರಾದ ಶ್ರೀಕಲಾ ಕೆ .ಟಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಎಚ್‌ಸಿಗಳಾದ ಪ್ರೇಮಾನಂದ, ಸತೀಶ್ ಎಮ್ ಆರ್, ಸಯ್ಯದ್ ಇಮ್ತಿಯಾಝ್, ಚೆರಿಯನ್ ಕೆ, ಜೇಮ್ಸ್ ಸಿಪಿಸಿಗಳಾದ ಶಶಿಕುಮಾರ್, ರಾಕೇಶ್ ಎಲ್ ಎಮ್, ಮಂಜುನಾಥ ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ಆ್ಯಂಟಿ ಡ್ರಗ್ಸ್ ಸ್ಕ್ವಾಡ್‌ನ ಪಿಎಸ್‌ಐ ರಾಘವೇಂದ್ರ ಎಮ್ ನಾಯ್ಕ ಮತ್ತು ಸಿಬ್ಬಂದಿ ಸುನೀಲ್ ಎಚ್ ಎಂ, ವಿನಾಯಕ್, ಬಸವರಾಜ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News