ಮಂಗಳೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮರು ಸೇರ್ಪಡೆಗೆ ಆಗ್ರಹಿಸಿ ಕುಡುಬಿ ಸಮುದಾಯದಿಂದ ಹಕ್ಕೊತ್ತಾಯ ಜಾಥಾ
ಮಂಗಳೂರು: ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಅನುಚ್ಛೇದ 341 (1) ರಂತೆ ಇದ್ದ ಸಾಂವಿಧಾನಿಕ ಹಕ್ಕನ್ನು ಮರಳಿ ನೀಡಬೇಕೆಂದು ಒತ್ತಾಯಿಸಿ ಕುಡುಬಿ ಸಮುದಾಯದವರು ನಗರದಲ್ಲಿ ಮಂಗಳವಾರ ಹಕ್ಕೊತ್ತಾಯ ಜಾಥಾ ನಡೆಸಿದರು.
ನಗರದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಕುಡುಬಿ ಸಮುದಾಯದವರು, ತಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
1936ರ ಪರಿಶಿಷ್ಟ ಜಾತಿಗಳ ಪಟ್ಟಿ ಕುಡುಬಿ ಸಮುದಾಯದ ಹೆಸರು ಒಳಗೊಂಡಿತ್ತು. 1950ರಲ್ಲಿ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ ಸಾಂವಿಧಾನಿಕ ರಕ್ಷಣೆ ನೀಡಲಾಗಿತ್ತು. ಆದರೆ, 1956ರ ಮಾರ್ಪಾಡು ಆದೇಶದಲ್ಲಿ ಕುಡುಬಿ ಜಾತಿಯ ಹೆಸರನ್ನು ಕುಡುಂಬನ್ ಎಂದು ತಪ್ಪಾಗಿ ಮುದ್ರಿಸಿ ನಮ್ಮ ಸಮುದಾಯವನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕೇಂದ್ರ ಸರಕಾರವು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು ಆಗ್ರಹಿಸಿದರು.
ಹಕ್ಕೊತ್ತಾಯ ಜಾಥಾದಲ್ಲಿ ಕುಡುಬಿ ಸಮುದಾಯದ ಸಹಸ್ರಾರು ಮಂದಿ ಭಾಗವಹಿಸಿದ್ದರು.