ಮಂಗಳೂರು: ಬ್ಯಾರೀಸ್ ವೆಲ್ಫೇರ್ ಫೋರಂನಿಂದ 11 ಜೋಡಿಗಳ ಸಾಮೂಹಿಕ ವಿವಾಹ

Update: 2024-02-17 08:27 GMT

ಮಂಗಳೂರು, ಫೆ.17: ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ವತಿಯಿಂದ 11 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ನಗರ ಹೊರವಲಯದ ಗಂಜಿಮಠದಲ್ಲಿರುವ ಝಾರಾ ಕನ್ವೆನ್ಶನ್ ಸೆಂಟರ್ ನಲ್ಲಿ ಶನಿವಾರ ನಡೆಯಿತು.

ಬಿಡಬ್ಲ್ಯುಎಫ್ ಸಂಘಟಿಸುತ್ತಿರುವ ಎಂಟನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯೆನೆಪೊಯ ವಿವಿಯ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬಿಡಬ್ಲ್ಯುಎಫ್ ಸಮಾಜದ, ಸಮುದಾಯದ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ. ಇಂದು ವಿವಾಹವಾದ 11 ಜೋಡಿ ನವದಂಪತಿಗೆ ಅಲ್ಲಾಹನು ಅನುಗ್ರಹಿಸಲಿ ಎಂದು ಹಾರೈಸಿದರು.

ದ.ಕ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ಗೆ ನೇತೃತ್ವ ವಹಿಸಿದ್ದರು. ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮತ್ತು ಆಶೀರ್ವಚನ ನೀಡಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಶುಭ ಹಾರೈಸಿದರು.

ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ, ಕೃಷ್ಣಾಪುರ ಖಾಝಿ ಇ.ಕೆ.ಇಬ್ರಾಹೀಂ ಮುಸ್ಲಿಯಾರ್, ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್, ನಂಡೆ ಪೆಂಙಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ, ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್, ಮುಸ್ಲಿಮ್ ಸಮುದಾಯದ ಮುಂದಾಳುಗಳಾದ ಹಾಜಿ ಮುಹಮ್ಮದ್ ಹನೀಫ್, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೆ.ಕೆ.ಶಾಹುಲ್ ಹಮೀದ್, ಮುಹಮ್ಮದ್ ಸಲೀಂ, ಆಲಿ ಕುಂಞಿ ಪಾರೆ, ಆಸಿಫ್ ಸೂಫಿಖಾನ, ಹಕೀಂ ತುರ್ಕಲಿಕೆ, ಅಬ್ಬಾಸ್ ಉಚ್ಚಿಲ್, ಎಸ್.ಎಂ.ಫಾರೂಕ್, ಮುಹಮ್ಮದ್ ರಫೀಕ್ ಕೃಷ್ಣಾಪುರ, ಡಾ.ನಝೀರ್ ಉಬರ್, ಮುಹಮ್ಮದ್ ಸಿದ್ದೀಕ್ ಕಾಪು ಭಾಗವಹಿಸಿದ್ದರು.

ಬ್ಯಾರೀಸ್ ವೆಲ್ಫೇರ್ ಫೋರಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ.ಎಸ್. ಅಬೂಬಕರ್ ಕಿರಾಅತ್ ಪಠಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಬಶೀರ್ ಬಜ್ಪೆ ವಂದಿಸಿದರು.

*ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಮಂಗಳೂರಿನ ಭಾರತ್ ಇನ್ಫ್ರಾಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫ ಎಸ್.ಎಂ. ಮತ್ತು ಸೌದಿ ಅರೇಬಿಯಾದ ಅಲ್ ಜುಬೈಲ್‌ನಲ್ಲಿರುವ ಅಲ್ ಮುಝೈನ್ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಝಕರಿಯಾ ಜೋಕಟ್ಟೆ ಅವರನ್ನು ಜೀವಮಾನ ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು.

*ಗೌರವಾರ್ಪಣೆ: ರಾಜ್ಯ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಮತ್ತು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪರವಾಗಿ ಒಕ್ಕೂಟದ ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿಯವರನ್ನು ಗೌರವಿಸಲಾಯಿತು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News