ಮಂಗಳೂರು: ಜೋಗಿ ಸಮುದಾಯದಿಂದ ಉಪವಾಸ ಸತ್ಯಾಗ್ರಹ

Update: 2023-08-27 13:43 GMT

ಮಂಗಳೂರು, ಆ.27: ಕದ್ರಿ ಜೋಗಿಮಠ ಹಿತರಕ್ಷಣಾ ಸಮಿತಿ, ದ.ಕ. ಜೋಗಿ ಸಮಾಜ ಸುಧಾರಕ ಸಂಘ, ಕದ್ರಿ ಶ್ರೀ ಜೋಗಿಮಠ ಜೀರ್ಣೋದ್ಧಾರ ಮತ್ತು ನಿರ್ವಹಣಾ ಸಮಿತಿಯ ವತಿಯಿಂದ ನಗರದ ಕದ್ರಿ ಜೋಗಿಮಠದಲ್ಲಿ ಶ್ರೀಕಾಲ ಬೈರವ ದೇವರ ಮೂಲಮೂರ್ತಿ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ರವಿವಾರ ಜೋಗಿ ಸಮಾಜದ ಬಂಧುಗಳಿಂದ ಉಪವಾಸ ಸತ್ಯಾಗ್ರಹ ನಡೆಯಿತು.

ಕಾಲಭೈರವದೇವರಿಗೆ ಬ್ರಹ್ಮಕಲಶೋತ್ಸವ ಹಾಗೂ ಮೂರ್ತಿ ಪುನಃ ಪ್ರತಿಷ್ಠಾಪನೆಯು ಕಳೆದ ಫೆಬ್ರವರಿಯಲ್ಲಿ ನಡೆದಿದ್ದು, ಸಾವಿರಾರು ವರ್ಷ ಇತಿಹಾಸ ಇರುವ ಮೂಲ ಮೂರ್ತಿಯನ್ನು ಬಿಟ್ಟು ಯಾರೋ ಮಾರ್ವಾಡಿಗಳು ಕೊಡಮಾಡಿದ ಅಮೃತ ಶಿಲೆಯನ್ನು ಇಟ್ಟು ಬ್ರಹ್ಮಕಲಶ ಮಾಡಿದ್ದು ಬಹುದೊಡ್ಡ ಅಪಚಾರವಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆ ನೀಡಿದ ಆದೇಶವನ್ನು ಜಾರಿಗೊಳಿಸಿ ಶ್ರೀ ಕಾಲಬೈರವ ದೇವರ ಮೂಲ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಮಾಜಿ ಮೇಯರ್, ಜೋಗಿ ಸಮಾಜದ ಮುಖಂಡ ಹರಿನಾಥ್ ಜೋಗಿ ಒತ್ತಾಯಿಸಿದರು.

ಈಗಿನ ನಿರ್ಮಲನಾಥ ಸ್ವಾಮೀಜಿ ಮಠಾಧಿಪತಿಗಳು ಕಾಲಬೈರವನ ಆರಾಧಕರಾದ ಸ್ಥಳೀಯ ಜೋಗಿ ಸಮಾಜದ ಬಂಧುಗಳ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ. ರಾಜಸ್ಥಾನದ ಭಕ್ತರು ಹಾಗೂ ಕೆಲವರು ಸೇರಿಕೊಂಡು ಪುರಾತನ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಕಾಲಭೈರವ ದೇವರ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿ ಬಿಸಾಡಿದ್ದರು. ಯಾವುದೇ ವಿಧಿವಿಧಾನ ಅನುಸರಿಸದೆ ಚೀಲದಿಂದ ತೆಗೆದು ಹೊಸ ವಿಗ್ರಹ ಕೂರಿಸಿದ್ದಾರೆ. ಮಠ ಜೋಗಿ ಸಮುದಾಯಕ್ಕೆ ಸೇರಿದ್ದು, ಮಠಾಧೀಶರ ನಿರ್ದೇಶನದಲ್ಲಿ ಜೋಗಿಗಳೇ ಪ್ರತಿನಿತ್ಯ ಪೂಜೆ ನಡೆಸಬೇಕು ಎಂದರು.

ಹಳೆಯ ಕಾಲಭೈರವ ದೇವರ ವಿಗ್ರಹವನ್ನು ಮಠಾಧಿಪತಿಗಳು ಮಾರಾಟಕ್ಕೆ ಯತ್ನಿಸಿದ್ದರು. ನಾವು ಪ್ರಾಚ್ಯವಸ್ತು ಇಲಾಖೆ ಯನ್ನು ಸಂಪರ್ಕಿಸಿ ಮಾರಾಟ ತಡೆದಿದ್ದೇವೆ. ಮೊದಲಿನ ವಿಗ್ರಹವನ್ನೇ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಬೇಸತ್ತು ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಇದು ಸಾಂಕೇತಿಕ ವಾಗಿದ್ದು ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.

ಕದ್ರಿ ಜೋಗಿ ಮಠ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಜೀರ್ಣೋದ್ದಾರ ಮತ್ತು ಕಾರ್ಯನಿರ್ವಹಣ ಸಮಿತಿಯ ಕಾರ್ಯದರ್ಶಿ ಹರೀಶ್ ಎಸ್. ಜೋಗಿ, ಸಮಾಜದ ಪ್ರಮುಖರಾದ ಕೆ. ದಯಾನಂದ ಜೋಗಿ, ಬಾಲಕೃಷ್ಣಕದ್ರಿ, ನಾಗೇಂದ್ರ ಚಿಲಿಂಬಿ, ಸತೀಶ್ ಜೋಗಿ ಮಾಲೆಮಾರ್, ದಿವ್ಯಾ ನವೀನ್, ವಿದ್ಯಾ ಗಣೇಶ್, ಶರತ್ ಕುಮಾರ್, ಜಗಜೀವನ್‌ದಾಸ್, ಸುರೇಶ್ ಕುಮಾರ್, ನಾಗೇಶ್, ಗಣೇಶ್, ಕಾನೂನು ಸಲಹೆಗಾರರಾದ ಹರೀಶ್ ಎಸ್., ಮೋಹನ್, ವಸಂತ್ ಜೋಗಿ, ಜಯಂತ್ ಜೋಗಿ, ದಯಾನಂದ ಜೋಗಿ, ಪ್ರಮಿತ್ ಜೋಗಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News