ಮಂಗಳೂರು ವಿವಿ: ಲೇಖಕಿಯರ ಬದುಕು ಮತ್ತು ಬರಹ ಕುರಿತ 'ಲೇಖ ಲೋಕ-9' ಕಾರ್ಯಕ್ರಮ ಉದ್ಘಾಟನೆ

Update: 2023-08-29 12:49 GMT

ಕೊಣಾಜೆ: ಮಹಿಳಾ ಸಾಹಿತ್ಯ ಚರಿತ್ರೆಯು ಆಯಾ ಕಾಲಕ್ಕನುಸಾರವಾಗಿ ಯಾವ ರೀತಿಯ ಬದಲಾವಣೆಗೆ ತೆರೆದು ಕೊಂಡಿತು, ಎದುರಾದ ಅಡ್ಡಿ, ಸವಾಲುಗಳೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ಇಂತಹ ಸವಾಲು ಗಳನ್ನು ಲೇಖಕಿಯರು ಯಾವ ರೀತಿಯಲ್ಲಿ ನಿಭಾಯಿಸಿದರು ಎನ್ನುವುದನ್ನು ಲೇಖ ಲೋಕ ಕಾರ್ಯಕ್ರಮದ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಲೇಖಕಿಯರ ಸಂಘ( ರಿ) ಬೆಂಗಳೂರು, ಕರಾವಳಿಯ ಲೇಖಕಿಯರ ವಾಚಕಿ ಯರ ಸಂಘ(ರಿ)ದ ಆಶ್ರಯದಲ್ಲಿ ಮಂಗಳವಾರ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕ 'ಲೇಖ ಲೋಕ-9' ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯು ಕುಟುಂಬ, ಸಮಾಜ , ಅರ್ಥವ್ಯವಸ್ಥೆ, ರಾಜಕೀಯ ಈ ಎಲ್ಲದರ ಜೊತೆಗೆ ತಮ್ಮನ್ನು ತಾವು ಹೇಗೆ ಗುರುತಿಸಿ ಕೊಂಡಿದ್ದಾರೆ ಎನ್ನುವ ಜೊತೆಗೆ ಬರಹ ಮತ್ತು ಬದುಕುಗಳ ಒಳಕೊಂಡಿಗಳು ಏನು ಎಂಬುದನ್ನು ನಾವು ಅರ್ಥ ಮಾಡಿಕೊ ಳ್ಳಬೇಕು ಎಂದು ಹೇಳಿದರು.

ಒಂದು ನಿಶ್ಚಿತವಾದ ಗುರಿಯನ್ನು ಇಟ್ಟುಕೊಂಡು ಬರವಣಿಗೆಗೆ ಹೊರಟರೆ ನಾವು ಆಗ ವಿಷಯಕ್ಕುನುಸಾರವಾಗಿ ತೆರೆದು ಕೊಳ್ಳುವುದರೊಂದಿಗೆ ಹಾಗೂ ನಾವು ಹೇಳಬೇಕಾದಂತಹ ವಿಷಯವನ್ನು ಸ್ಪಷ್ಟವಾಗಿ ದಾಖಲಿಸು ಸಾಧ್ಯವಾಗುತ್ತದೆ. ಆತ್ಮಕತೆ ಎನ್ನುವಾಗ ಸಹಜವಾಗಿ ವೈಯಕ್ತಿಕ ಬದುಕಿನ ಬಾಲ್ಯ, ಯೌವನ ಅಥವಾ ವೈವಾಹಿಕ ಜೀವನ ಮೊದಲಾದ ಸಂಗತಿಗಳು ಮಹಿಳಾ ಆತ್ಮಕಥನಗಳಲ್ಲಿ ಕಾಣುವ ಸ್ವರೂಪವಾಗಿವೆ. ಪುರುಷರ ಆತ್ಮಕಥನಗಳು ಇದಕ್ಕಿಂತ ಸ್ವಲ್ಪ ಭಿನ್ನವಾಗಿರುವುದನ್ನು ನಾವು ಗಮನಿಸಬಹುದು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ.ಜ್ಯೋತಿ ಚೇಳ್ಯಾರು ಅವರು, ದ.ಕ.ಜಿಲ್ಲೆಯ ಮಹಿಳಾ ಲೇಖಕಿಯರ ಚರಿತ್ರೆಯನ್ನು ಗಮನಿಸಿದರೆ ಬರೆದವರು ತುಂಬಾ ಜನರು ಇದ್ದರೂ ಅದನ್ನು ದಾಖಲಿಸುವ ವ್ಯವಸ್ಥೆ ಇಲ್ಲದೆ ಎಷ್ಟೋ‌ ಮಹಿಳಾ ಲೇಖಕರನ್ನು ಗುರುತಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿಯೂ ಮಹಿಳಾಪರವಾದ ಯೋಚನೆ ಯಾಕೆ ಅಗತ್ಯವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಸಮಾಜದಲ್ಲಿ ಮಹಿಳೆಯ ಘನತೆಯನ್ನು ಕಾಯ್ದುಕೊಳ್ಳಲು ಮತ್ತು ಆಕೆಯ ಮೌಲ್ಯ ಎಂದಿಗೂ ಕಡಿಮೆಯಾಗದಂತೆ ಮಾಡಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಮಹಿಳೆಯು ಮೌನ ಮುರಿದು ದೈರ್ಯವಾಗಿ ಮಾತನಾಡಲು ಕಲಿಯಲು, ಬೆಳೆಯಲು ಇಂತಹ ಸಾಂಸ್ಥಿಕ ಸಂಸ್ಥೆಗಳ ಅಗತ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷರತೆಯನ್ನು ವಹಿಸಿ ಮಾತನಾಡಿದ ಪ್ರಭಾರ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು, ಅನುಭವ ಲಿಖಿತ ರೂಪದಲ್ಲಿ ಬಂದಾಗ ಅವುಗಳ ಹಿಂದಿರುವ ಸತ್ಯಾಸತ್ಯತೆಯನ್ನು ಅರಿಯಲು ಸಾಧ್ಯವಾಗುತ್ತದೆ. ಮಹಿಳೆಯರ ಆತ್ಮಕತೆಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಅನೇಕ ಸಂಗತಿಗಳನ್ನು ತೆರೆದಿಡುತ್ತದೆ. ಒಬ್ಬರ ಅನುಭವ ಮತ್ತೊಬ್ಬರ ಬದುಕಿಗೆ ದಾರಿದೀಪವಾಗಲೂ ಬಹುದು. ಆದ್ದರಿಂದ‌ ಲೇಖಕಿಯರ ಸಂಘದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಬಹಳ ಮಹತ್ವಪೂರ್ಣವಾದುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ ಹೊಂಗಳ್ಳಿ, ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಲೇಖಕಿಯರ‌ ಸಂಘ(ರಿ) ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಎಚ್ .ಎಲ್ ಪುಷ್ಪ ಅವರು ಆಶಯದ ನುಡಿಗಳನ್ನಾಗಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಪ್ರೊ.ಕಿಶೋರಿ‌ ನಾಯಕ್ ಹಾಗೂ ಲೇಖಕಿಯರ ಸಂಘದ ಪದಾಧಿಕಾರಿಗಳು ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News