ಮಂಗಳೂರು: ಕಾರ್ಮಿಕರ ಧರಣಿ ಸತ್ಯಾಗ್ರಹ ಅಂತ್ಯ

Update: 2023-08-24 16:02 GMT

ಮಂಗಳೂರು, ಆ.24: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಮೂರು ದಿನದಿಂದ ಕಟ್ಟಡ ಕಾರ್ಮಿಕರು ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವು ಗುರುವಾರ ಅಂತ್ಯಗೊಂಡಿತು.

ಈ ಸಂದರ್ಭ ಮಾತನಾಡಿದ ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ‘ಕಟ್ಟಡ ಕಾರ್ಮಿಕರ ಉತ್ತಮ ಬದುಕಿ ಗಾಗಿ ಕಳೆದ 16 ವರ್ಷಗಳ ಹಿಂದೆ ರಚನೆಗೊಂಡ ಕಲ್ಯಾಣ ಮಂಡಳಿಯ ಕೋಟ್ಯಂತರ ರೂ.ವನ್ನು ಅವೈಜ್ಞಾನಿಕ ಯೋಜನೆ ಗಳ ಹೆಸರಿನಲ್ಲಿ ಹಿಂದಿನ ಬಿಜೆಪಿ ಸರಕಾರವು ಗುಳುಂ ಮಾಡಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಮೂಲಕ ಬಿಜೆಪಿಯ ಅಕ್ರಮಗಳನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಬಿಜೆಪಿ ಸರಕಾರವು ಶಿಶುವಿಹಾರ ಕೇಂದ್ರ, ಮೊಬೈಲ್ ಕ್ಲಿನಿಕ್, ಬಸ್ ಪಾಸ್ ಮುಂತಾದ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿ ಕೋಟ್ಯಂತರ ಹಣವನ್ನು ನುಂಗಿ ಹಾಕಿವೆ. ಅಲ್ಲದೆ ವಿವಿಧ ಸವಲತ್ತುಗಳಿಗಾಗಿ ಹಾಕಿದ ಅರ್ಜಿಗಳನ್ನು ಕಾರಣವಿಲ್ಲದೆ ತಿರಸ್ಕರಿಸಿ ಕಾರ್ಮಿಕರಿಗೆ ಅನ್ಯಾಯ ಮಾಡಿವೆ. ಕೇವಲ ಪಿಂಚಣಿ ಯೋಜನೆಗಾಗಿ ಜೀವಿತಾವಧಿಯ ಪ್ರಮಾಣ ಪತ್ರಕ್ಕಾಗಿ ಕಟ್ಟಡ ಕಾರ್ಮಿಕರನ್ನು ಅಲೆದಾಡಿಸುವ ಸರಕಾರದ ನೀತಿ ಖಂಡನೀಯವಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ, ಜಯಂತ ನಾಯಕ್, ದಿನೇಶ್ ಶೆಟ್ಟಿ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ದಿನೇಶ್ ಇರುವೈಲ್, ವಿಶ್ವನಾಥ ಸುಳ್ಯ, ಪ್ರಸಾದ್ ಪೆಲ್ತಾಡ್ಕ, ಲೋಕೇಶ್ ಅಳಪೆ, ಯಶೋಧಾ, ಪಾಂಡುರಂಗ, ಶಂಕರ ಮೂಡುಬಿದಿರೆ, ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News