ಮಂಗಳೂರು: ಕೊಲೆಯತ್ನ ಪ್ರಕರಣದ ಆರೋಪಿಗಳ ಅಪರಾಧ ಸಾಬೀತು
ಮಂಗಳೂರು, ಅ.30: ನಗರದ ಕುದ್ರೋಳಿ ಸಮೀಪದ ಅಳಕೆ ಮಾರ್ಕೆಟ್ ಬಳಿ 2015ರಲ್ಲಿ ನಡೆದ ಕುದ್ರೋಳಿಯ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಕೊಲೆಯತ್ನ ಪ್ರಕರಣದ ಐವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಸೋಮವಾರ ತೀರ್ಪು ನೀಡಿದ್ದಾರೆ.
ಮುಲ್ಕಿ ನಿವಾಸಿಗಳಾದ ರವಿಚಂದ್ರ ಯಾನೆ ವಿಕ್ಕಿ ಪೂಜಾರಿ ಯಾನೆ ಸೈಕೊವಿಕ್ಕಿ (32), ಆತನ ಸಹೋದರ ಶಶಿ ಪೂಜಾರಿ(30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್(28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದ ಆರೋಪಿಗಳು. ಈ ಪ್ರಕರಣದ ಇನ್ನೋರ್ವ ಆರೋಪಿ ಗಣೇಶ್ (28) ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: 2015ರ ಜು.27ರಂದು ಸಂಜೆ 6:30ಕ್ಕೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಳಕೆ ಮಾರ್ಕೆಟ್‌ನ ಮುಂದೆ ಲತೀಶ್ ನಾಯಕ್ ತನ್ನ ಗೆಳೆಯರಾದ ಇಂದ್ರಜಿತ್, ಸಿದ್ಧಾರ್ಥ್, ಪ್ರತಾಪ್, ಮಿಥುನ್, ಸುಶಾಂತ್ ಅವರೊಂದಿಗಿದ್ದ. ಮನೆಯಿಂದ ಕರೆ ಬಂದ ಮೇರೆಗೆ ಅಲ್ಲಿಂದ ಹೊರಟ ಲತೀಶ್ ನಾಯಕ್ ರಸ್ತೆ ದಾಟುತ್ತಿದ್ದಾಗ ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು ಲತೀಶ್‌ನಿಗೆ ಢಿಕ್ಕಿ ಹೊಡೆದಿದ್ದರು. ಬಳಿಕ ಕಾರಿನಿಂದ ಇಳಿದು ತಲವಾರನಿಂದ ಹಲ್ಲೆ ನಡೆಸಿದ್ದರು. ಲತೀಶ್‌ನನ್ನು ಬಿಡಿಸಲು ಬಂದ ಇಂದ್ರಜಿತ್‌ನ ಮೇಲೆ ಕೂಡ ದಾಳಿ ನಡೆಸಿದ್ದರು. ಇದರಿಂದ ಲತೀಶ್ ಮತ್ತು ಇಂದ್ರಜಿತ್ ಗಂಭೀರವಾಗಿ ಗಾಯಗೊಂಡಿದ್ದರು. ಹಳೆಯ ದ್ವೇಷದಿಂದ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಬಳಿಕ ಲತೀಶ್‌ನ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು ಎಂದು ತನಿಖೆ ನಡೆಸಿದ್ದ ಅಂದಿನ ಇನ್ಸ್‌ಪೆಕ್ಟರ್‌ಗಳಾದ ಟಿ.ಡಿ.ನಾಗರಾಜ್ ಮತ್ತು ಭಜಂತ್ರಿ ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.
ಅಲ್ಲದೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 148, 307 ಮತ್ತು 149 ಅಡಿ ದಾಖಲಾದ ಆರೋಪಗಳು ಸಾಬೀತಾಗಿರುವುದಾಗಿ ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ವಾದಿಸಿದ್ದಾರೆ. ಪ್ರಾಸಿಕ್ಯೂಷನ್ 17 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಿ 29 ದಾಖಲಾತಿಗಳನ್ನು ಗುರುತಿಸಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಮಂಗಳವಾರ ಪ್ರಕಟಿಸಲಿದ್ದಾರೆ.
ಆರೋಪಿಗಳ ಪೈಕಿ ಶಶಿ ಪೂಜಾರಿ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈತ ಮೈಸೂರು ಕಾರಾಗೃಹದಲ್ಲಿದ್ದಾನೆ ಎಂದು ತಿಳಿದು ಬಂದಿವೆ.
2015ರಲ್ಲಿ ತನ್ನ ಗೆಳೆಯ ಲತೀಶ್ ನಾಯಕ್‌ನ ಮೇಲೆ ನಡೆದ ದಾಳಿಯನ್ನು ತಪ್ಪಿಸಲು ಹೋಗಿದ್ದ ಇಂದ್ರಜಿತ್‌ನ ಕೈಗಳಿಗೆ ಗಂಭೀರ ಗಾಯವಾಗಿತ್ತು. ಲತೀಶ್ ನಾಯಕ್ ಮೇಲಿನ ದಾಳಿ ಪ್ರಕರಣದಲ್ಲಿ ಇಂದ್ರಜಿತ್ ಕೂಡ ಸಾಕ್ಷಿದಾರನಾಗಿದ್ದ. 2019ರಲ್ಲಿ 2 ಬಾರಿ ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷಿ ಹೇಳಿದ್ದ. ಆದರೆ 2020ರ ನ.26ರಂದು ತಾನೇ ಕೊಲೆಯಾಗಿದ್ದ. ಇಂದ್ರಜಿತ್ ಬೊಕ್ಕಪಟ್ಣದಲ್ಲಿ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆಂದು ರಾತ್ರಿ ಹೋಗಿ ವಾಪಸಾಗುತ್ತಿದ್ದಾಗ ಮೋಕ್ಷಿತ್, ಜಗ್ಗ ಯಾನೆ ಜಗದೀಶ್ ಮತ್ತಿತರರು ಬೋಳೂರಿನ ಕರ್ನಲ್ ಗಾರ್ಡನ್ ಬಳಿ ತಲವಾರು ಬೀಸಿ ಕೊಲೆ ಮಾಡಿದ್ದರು. ಜಗ್ಗ ಯಾನೆ ಜಗದೀಶ್‌ನಿಗೆ ಇಂದ್ರಜಿತ್ ಮೇಲಿದ್ದ ಹಳೆಯ ದ್ವೇಷವೂ ಈ ಕೊಲೆಗೆ ಕಾರಣವಾಗಿತ್ತು. ಅಲ್ಲದೆ ಲತೀಶ್ ನಾಯಕ್ ಪ್ರಕರಣದಲ್ಲಿ ಇಂದ್ರಜಿತ್ ಸಾಕ್ಷಿ ಹೇಳಿದ್ದ ದ್ವೇಷವೂ ಮೋಕ್ಷಿತ್ ಮತ್ತಿತರರಿಗೆ ಇತ್ತು ಎನ್ನಲಾಗಿದೆ.