ಮಂಗಳೂರು: ಸ್ಥಳಾಂತರಿಸಬೇಕಿದ್ದ ಮರಕ್ಕೆ ಕೊಡಲಿ; ಪರಿಸರ ಪ್ರೇಮಿಗಳಿಂದ ತಡೆ

Update: 2023-10-03 13:41 GMT

ಮಂಗಳೂರು: ನಗರದ ನಂತೂರು ಮತ್ತು ಕೆಪಿಟಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಗಾಗಿ ಎನ್‌ಎಚ್‌ಐನಿಂದ ರಸ್ತೆಯ ಇಕ್ಕೆಲಗಳ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳಿಂದ ಶವಸಂಸ್ಕಾರದ ಅಣುಕು ಪ್ರದರ್ಶನ ಮಂಗಳವಾರ ನಡೆಯಿತು.

ಮೇಲ್ಸೇತುವೆ ನಿರ್ಮಾಣದಿಂದ ತೆರವುಗೊಳಿಸಬೇಕಾದ ಮರಗಳ ಕುರಿತಂತೆ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಸಂಘಟನೆಯು ಅರಣ್ಯ ಅಧಿಕಾರಿಗಳು ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಪರಿಸರ ಪ್ರೇಮಿಗಳ ಸಮಕ್ಷಮದಲ್ಲಿ ಈ ಹಿಂದೆ ಸಭೆ ನಡೆಸಿ 602 ಮರಗಳನ್ನು ಗುರುತಿಸಲಾಗಿತ್ತು. ಇದರಲ್ಲಿ 232 ಮರಗಳನ್ನು ಸ್ಥಳಾಂತರ ಮಾಡಲು 370 ಮರಗಳನ್ನು ಕಡಿಯಲು ಅರಣ್ಯಾಧಿಕಾರಿಗಳು ಗುರುತಿಸಿದ್ದರು.

ಮರಗಳನ್ನು ಸ್ಥಳಾಂತರ ಮಾಡಿದ ಬಳಿಕ ಮರಗಳ ಕಡಿಯುವ ಪ್ರಕ್ರಿಯೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಈ ಹಿಂದೆಯೇ ಒತ್ತಾಯಿಸಿದ್ದರು. ಮರಗಳ ಸ್ಥಳಾಂತರ ಹಾಗೂ ಕಡಿಯುವ ಪ್ರಕ್ರಿಯೆಯನ್ನು ಸಕಲೇಶಪುರದ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಏಕಾಏಕಿ ಅರಣ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಈ ಏಜೆನ್ಸಿಯ ಸಿಬ್ಬಂದಿ ಸ್ಥಳಾಂತರ ಮಾಡಬಹುದಾದ ಮರಗಳಿಗೆ ಕೊಡಲಿ ಏಟು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು. ಮರ ಕಡಿಯುತ್ತಿರುವ ಮಾಹಿತಿ ತಿಳಿದ ತಕ್ಷಣ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಪರಿಸರ ಪ್ರೇಮಿ ಸಂಘಟನೆಯ ಸದಸ್ಯರು ಸ್ಥಳಕ್ಕೆ ತೆರಳಿ ಮರ ಕಡಿಯುವುದನ್ನು ತಡೆದಿದ್ದಾರೆ. ಅದಾಗಲೇ ನಾಲ್ಕು ಮರಗಳನ್ನು ಮರಗಳನ್ನು ಕಡಿಯಲಾಗಿತ್ತು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಅರಣ್ಯಾಧಿಕಾರಿಗಳು, ಮರ ಕಡಿಯುವ ಏಜೆನ್ಸಿ ಹಾಗೂ ಪರಿಸರವಾದಿಗಳ ನಡುವೆ ವಾಗ್ವಾದ ನಡೆಯಿತು. ಮರಗಳ ಕಡಿತವನ್ನು ವಿರೋಧಿಸಿದ ಪರಿಸರ ಪ್ರೇಮಿಗಳು ಕಡಿದು ಬಿದ್ದ ಮರಗಳ ತುಂಡುಗಳಿಗೆ ಬಿಳಿ ಬಟ್ಟೆ ಹೊದಿಸಿ ಅಧಿಕಾರಿಗಳ ಅಣಕು ಶವ ಪ್ರದರ್ಶನ ಮಾಡಿದರು.

ಪ್ರತಿಭಟನೆಯಲ್ಲಿ ಪರಿಸರ ಪ್ರೇಮಿಗಳಾದ ದಿನೇಶ್ ಹೊಳ್ಳ, ಜೀತ್ ಮಿಲನ್ ರೋಚ್, ಬೆನೆಡಿಕ್ಟ್, ಭುವನ್ ದೇವಾಡಿಗ, ಅನಿಲ್ ಪಿಂಟೋ, ಸೆಲ್ಮಾ ರೋಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

‘ಮೇಲ್ಸೇತುವೆ ನಿರ್ಮಾಣಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಆದರೆ ಸ್ಥಳಾಂತರ ಮಾಡಬಹುದಾದ ಮರಗಳನ್ನು ಕಡಿಯಲು ಆರಂಭಿಸಿದ್ದಾರೆ. ಈಗಾಗಲೇ ಮಳೆ ಇಲ್ಲದೆ, ಭೂಮಿ ಬರಡಾಗುತ್ತಿದೆ. ಉಷ್ಣಾಂಶ ಹೆಚ್ಚುತ್ತಿದೆ, ಅಂತರ್ಜಲ ಕುಸಿಯುತ್ತಿದೆ. ಇಂತಹ ಸಮಯದಲ್ಲಿ ನಗರದಲ್ಲಿ ಕೆಲವೇ ಕೆಲವು ಕಡೆ ಇರುವ ಮರಗಳನ್ನು ಈ ರೀತಿಯಾಗಿ ಅವೈಜ್ಞಾನಿಕ ವಾಗಿ ಕಡಿಯುತ್ತಾ ಹೋಗುವುದೆಂದರೆ ಅರ್ಥವಿಲ್ಲ.’

-ದಿನೇಶ್ ಹೊಳ್ಳ, ಪರಿಸರಪ್ರೇಮಿ. 






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News