ಮಂಗಳೂರು: ಮೇಯರ್‌ರಿಂದ ಪೌರ ಕಾರ್ಮಿಕರ ಪಾದಪೂಜೆ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಹಿರಿಯ ಪೌರ ಕಾರ್ಮಿಕರ ಪಾದಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಅವರು, ಪೌರಕಾರ್ಮಿಕರು ಒಂದು ದಿನ ಕೆಲಸ ನಿರ್ವಹಿಸದಿದ್ದರೆ ನಗರದ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಪೌರಕಾರ್ಮಿಕರು ದೇವತಾಸ್ವರೂಪರು ಎಂದರು.
ಪೌರಕಾರ್ಮಿಕರ ಮತ್ತು ಒಳಚರಂಡಿ ಕಾರ್ಮಿಕರ ಹಲವು ವರ್ಷಗಳ ಬೇಡಿಕೆಯಾದ ನೇರ ನೇಮಕಾತಿ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪಾಲಿಕೆ ಬದ್ಧವಾಗಿದೆ. ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಸ್ವಚ್ಛತೆಯಲ್ಲೂ ಮುಂಚೂಣಿಯಲ್ಲಿದೆ. ಇದಕ್ಕೆ ಪೌರಕಾರ್ಮಿಕರ ಸೇವೆ ಪ್ರಮುಖ ಕಾರಣ ಎಂದರು.
ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಮೇಲ್ವಿಚಾರಕರು, ಚಾಲಕರನ್ನು, ಪೌರಕಾರ್ಮಿಕರ ನೆಲೆಯಲ್ಲಿ ನೇರಪಾವತಿ ವ್ಯವಸ್ಥೆಯಲ್ಲಿ ಪರಿಗಣಿಸಬೇಕು ಎಂಬ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಪರಿಷತ್ತಿಗೆ ಕಾರ್ಯಸೂಚಿಯಾಗಿ ಇಡಲಾಗಿದೆ. ಒಳಚರಂಡಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಡಿಕೆ ಈಡೇರಿಸಲು ಪರಿಷತ್ತಿನಲ್ಲಿ ಮಂಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 176 ಖಾಯಂ ಪೌರರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು 111 ಪೌರ ಕಾರ್ಮಿಕರನ್ನು ಮತ್ತು ಪಾಲಿಕೆ ಆಯುಕ್ತರು 56 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿದ್ದಾರೆ. ಒಟ್ಟು 342 ಮಂದಿ ಕಾರ್ಮಿಕರು ನೇರ ನೇಮಕಾತಿಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ 394 ಪೌರಕಾರ್ಮಿಕರನ್ನು ಸದ್ಯದಲ್ಲೇ ನೇರ ನೇಮಕಾತಿ ಮಾಡಲಾಗುವುದು. ಪಾಲಿಕೆಯಲ್ಲಿ ಸ್ವಚ್ಛತೆಗೋಸ್ಕರ 789 ಪೌರಕಾರ್ಮಿಕರು ಬೇಕಾಗಿದ್ದು, ಈ ಕೆಲಸವನ್ನು ಪಾಲಿಕೆ ನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು.
ಉಪ ಮೇಯರ್ ಸುನೀತಾ ಅವರು ಮಾತನಾಡಿ, ಪೌರಕಾರ್ಮಿಕರ ಕೆಲಸವನ್ನು ಗುರುತಿಸುವುದು ನಮ್ಮ ಕರ್ತವ್ಯ. ಅವರು ತಮ್ಮ ಆರೋಗ್ಯ ಲೆಕ್ಕಿಸದೆ, ನಗರ ಶುಚಿತ್ವಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅವರ ಆರೋಗ್ಯಭದ್ರತೆಗೆ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.
ಪಾಲಿಕೆ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ಇಂದು ಹಿರಿಯ ಪೌರಕಾರ್ಮಿಕರ ಪಾದಪೂಜೆ ನೆರವೇರಿದ್ದು, ಈ ಮೂಲಕ ಉತ್ತಮ ಸಂದೇಶವೊಂದನ್ನು ರವಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪೌರಕಾರ್ಮಿಕರಾದ ಗೀತಾ, ಶೇಶಪ್ಪ, ಲಕ್ಷ್ಮಣ ಅವರ ಪಾದಪೂಜೆಯನ್ನು ನೆರವೇರಿಸಲಾ ಯಿತು. ಸೇವೆಯಿಂದ ನಿವೃತ್ತ ಏಳು ಮಂದಿ ಪೌರಕಾರ್ಮಿಕರನ್ನು, ಸಾಧನೆಗೈದ ಪೌರಕಾರ್ಮಿಕರ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮನಪಾ ಸದಸ್ಯರಾದ ನವೀನ್ ಡಿಸೋಜ, ಭರತ್ ಕುಮಾರ್ ಎಸ್., ವರುಣ್ ಚೌಟ, ಗಣೇಶ್, ಶಕೀಲ ಕಾವ, ಶ್ವೇತಾ, ಶೈಲೇಶ್, ಮನೋಜ್ ಕುಮಾರ್, ಲೀಲಾವತಿ ಪ್ರಕಾಶ್, ಸುಮಂಗಲಾ ರಾವ್, ಕದ್ರಿ ಮನೋಹರ ಶೆಟ್ಟಿ, ರಂಜಿನಿ ಕೋಟ್ಯಾನ್, ಪಾಲಿಕೆ ಆಯುಕ್ತ ಸಿ.ಎಲ್. ಆನಂದ್, ಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ದ.ಕ. ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಎಸ್.ಪಿ. ಆನಂದ್, ಪಾಲಿಕೆ ಅಧಿಕಾರಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.