ಮಂಗಳೂರು: ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿ ಪ್ರತಿಭಟನೆ
ಮಂಗಳೂರು, ಸೆ.11: ಪಿಎಸಿಎಲ್‌ನಂತಹ ಹಲವು ಬ್ಲೇಡ್ ಕಂಪೆನಿಗಳು ಬಡವರ ಬದುಕಿನ ಕನಸಿನ ಗೋಪುರ ಕಟ್ಟುವ ಮೋಸದ ಜಾಲವನ್ನು ಹೆಣೆದು ಹಲವು ಸ್ಕೀಮ್‌ಗಳ ಹೆಸರಲ್ಲಿ ಜನರಿಂದ ಹೂಡಿಸಿದ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗುತ್ತಿದೆ. ದೇಶದ ಆಳುವ ಸರಕಾರಗಳ ತಪ್ಪು ಆರ್ಥಿಕ ನೀತಿಗಳು ಇಂತಹ ಬ್ಲೇಡ್ ಕಂಪೆನಿಗಳು ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾರ್ಮಿಕ ಮುಖಂಡ, ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಪಿಎಸಿಎಲ್‌ನಿಂದ ಹೂಡಿಕೆದಾರರಿಗಾದ ಅನ್ಯಾಯವನ್ನು ಖಂಡಿಸಿ ಮತ್ತು ಪಿಎಸಿಎಲ್‌ನಿಂದ ಹಣ ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೊತ್ತವನ್ನು ಮರುಪಾವತಿಸಲು ಒತ್ತಾಯಿಸಿ, ಸಂತ್ರಸ್ತ ಹೂಡಿಕೆದಾರ ರಿಗೆ ಪರಿಹಾರ ವಿತರಿಸದ್ದನ್ನು ಖಂಡಿಸಿ ನಗರದ ಮಿನಿ ವಿಧಾನಸೌಧದ ಮುಂದೆ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಬಿ.ಕೆ. ಇಮ್ತಿಯಾಝ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ದೇಶದ ಎಲ್ಲಾ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿಯ) ಪ್ರಾದೇಶಿಕ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಸಂತ್ರಸ್ತ ಹೂಡಿಕೆದಾರರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸೆಬಿಯ ಪ್ರಾದೇಶಿಕ ಕಚೇರಿ ಮೂಲಕ ಜಿಲ್ಲಾ ಮಟ್ಟದ ಅದಾಲತ್ ನಡೆಸಿ ಹಣ ಕಳೆದುಕೊಂಡ ಸಂತ್ರಸ್ತರ ಸಮಗ್ರ ಮಾಹಿತಿ ದಾಖಲಿಸಬೇಕು. ಜಸ್ಟಿಸ್ ಲೋಧಾ ಕಮಿಟಿಯ ತನಿಖಾ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಬೇಕು ಮತ್ತು ಕಮಿಟಿಯ ಶಿಫಾರಸ್ಸು ಹಾಗೂ ಪರಿಹಾರಗಳ ಬಗ್ಗೆ ಹಾಗೂ ಪಿಎಸಿಎಲ್ ಕಂಪೆನಿಯಿಂದ ಮುಟ್ಟುಗೊಲು ಹಾಕಿರುವ 872 ಪ್ರಾಪರ್ಟಿಗಳ ಮೌಲ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವಂತಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಭಾರತಿ ಬೋಳಾರ, ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯ ಮುಖಂಡರಾದ ತೆಲ್ಮಾ ಮೊಂತೆರೋ, ಅಸುಂತ ಡಿಸೋಜ, ನ್ಯಾನ್ಸಿ ಫೆರ್ನಾಂಡಿಸ್, ಶಾಲಿನಿ, ವಾಯ್ಲೆಟ್, ಶ್ಯಾಮಲಾ, ಅರುಣಾ, ದಾಮೋದರ ಉಳ್ಳಾಲ ಪಾಲ್ಗೊಂಡಿದ್ದರು.