ಮಂಗಳೂರು: ಸ್ಟೇಟ್‌ಬ್ಯಾಂಕ್‌ನಿಂದ ಸಿಟಿ ಬಸ್ ಸಂಚಾರಕ್ಕೆ ಒತ್ತಾಯ
ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ಈ ಹಿಂದಿನಂತೆಯೇ ಸಿಟಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್‌ನ ಅಂಗ ಸಂಸ್ಥೆ ಯಾದ ಸ್ಟೇಟ್‌ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ಎಚ್ಚರಿಕೆ ನೀಡಿದೆ.
ಸಿಟಿ ಬಸ್‌ಗಳು ಸ್ಟೇಟ್‌ಬ್ಯಾಂಕ್‌ನಲ್ಲಿ ಈ ಹಿಂದಿನಂತೆ ಹ್ಯಾಮಿಲ್ಟನ್ ವೃತ್ತದ ಮತ್ತು ರಾವ್ ಆ್ಯಂಡ್ ರಾವ್ ವೃತ್ತದ ಮೂಲಕ ಹಾದು ಹೋಗುವಂತೆ ವ್ಯವಸ್ಥೆ ಮಾಡಬೇಕು. ವಾರದೊಳಗೆ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ನಗರ ಪೊಲೀಸ್ ಆಯುಕ್ತ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಸ್ಥೆ ಗೌರವಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಟೇಟ್‌ಬ್ಯಾಂಕ್‌ನಲ್ಲಿ ವ್ಯಾಪಾರಿಗಳಿಗೆ ಆಗುತ್ತಿರುವ ನಷ್ಟ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾಗಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿ, ಮನವರಿಕೆ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ನಗರ ಸಾರಿಗೆ ನಿಯಮಾವಳಿಯಂತೆ ಸಿಟಿ ಬಸ್‌ಗಳು ನಿಲ್ದಾಣದೊಳಗೆ ಹೋಗುವಂತಿಲ್ಲ ಅಥವಾ ಅವುಗಳಿಗೆ ನಿಲ್ದಾಣ ಎನ್ನುವುದಿಲ್ಲ. ತಂಗುದಾಣದಲ್ಲಿಯೇ ನಿಂತು ಅಲ್ಲಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು. ಸಿಟಿ ಬಸ್ ಗಳನ್ನು ತಂಗುದಾಣಗೊಳಗೆ ಹೋಗು ವ್ಯವಸ್ಥೆ ಮಾಡಿ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದರು.
ಪಾಲಿಕೆ ಸದಸ್ಯ ಮತ್ತು ಸಂಘದ ಕಾರ್ಯಾಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ, ಸಿಟಿ ಬಸ್ ತಂಗುದಾಣವನ್ನು ಸರ್ವಿಸ್ ಬಸ್ ತಂಗುದಾಣದೊಳಗೆ ಸ್ಥಳಾಂತರಿಸುವ ವಿಚಾರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ಏಕಪಕ್ಷೀಯವಾಗಿ ಮಾತ್ರವಲ್ಲದೆ, ಪ್ರಯೋಗಾತ್ಮಕವಾಗಿ ಸ್ಥಳಾಂತರಿಸುತ್ತಿದ್ದೇವೆ ಎಂದು ಹೇಳಿದವರು ಈಗ, ಶಾಶ್ವತವಾಗಿ ಸ್ಥಳಾಂತರಿಸಿ ದಂತಿದೆ ಎಂದು ಆಪಾದಿಸಿದರು.
ಒಕ್ಕೂಟದ ಅಧ್ಯಕ್ಷ ಜಯ ಶೆಟ್ಟಿ, ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ನವೀನ್ ಡಿಸೋಜ, ಹಮೀದ್ ಶಾ ಉಪಸ್ಥಿತರಿದ್ದರು.