ಮಂಗಳೂರು: ಮಹಿಳೆಗೆ ವಂಚನೆ ಆರೋಪ; ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

Update: 2023-08-26 14:26 GMT

ಮಂಗಳೂರು, ಆ.26: ನಗರದ ವಿಚ್ಛೇದಿತೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ವ್ಯವಹಾರದ ನೆಪದಲ್ಲಿ ಆಕೆಯಿಂದ 64 ಲಕ್ಷ ರೂ. ಪಡೆದು ಹಿಂದಿರುಗಿಸದೆ ವಂಚನೆಗೈದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಗೆ ತನ್ನ ಅಣ್ಣಂದಿರು ಮರು ಮದುವೆಯ ತಯಾರಿ ನಡೆಸುತ್ತಿದ್ದರು. ಈ ಮಧ್ಯೆ ತಾನು ತನ್ನ ಪ್ರೊಫೈಲ್‌ನ್ನು ಮ್ಯಾಟ್ರಿಮೋನಿಯಲ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಆವಾಗ ತಮಿಳುನಾಡಿನ ಪಳ್ಳಪಟ್ಟಿ ಮೂಲದ ಮುಹಮ್ಮದ್ ಫರೀದ್ ಶೇಖ್ ಎಂಬಾತ ಸಂಪರ್ಕಕ್ಕೆ ಬಂದು ಮದುವೆಯಾಗುವುದಾಗಿ ತಿಳಿಸಿದ್ದ. ಆವಾಗ ತಾನು ತನ್ನ ಅಣ್ಣಂದಿರ ಜತೆ ಮಾತುಕತೆ ನಡೆಸಲು ಸೂಚಿಸಿದ್ದೆ. ಹಾಗೇ ಮುಹಮ್ಮದ್ ಫರೀದ್ ಶೇಖ್ ಎಂಬಾತನು ತನ್ನ ಸಹೋದರರು ಎಂಬುವುದಾಗಿ ಸಾದಿಕ್ ಮತ್ತು ಮುಬಾರಕ್ ಎಂಬವರನ್ನು ಪರಿಚಯಿಸಿಕೊಂಡು ಕಂಕನಾಡಿಯಲ್ಲಿರುವ ರೆಸ್ಟೋರೆಂಟ್‌ಗೆ ಬಂದಿದ್ದ. ಆವಾಗ ಆತ ಈ ಹಿಂದೆ ಮದುವೆಯಾಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಎರಡು ದಿನದ ಬಳಿಕ ಆತ ತನಗೆ ವಾಟ್ಸ್‌ಆ್ಯಪ್ ಮೂಲಕ ಮೆಸೇಜ್ ಮಾಡತೊಡಗಿದ್ದು, ಬಳಿಕ ನಾನಾ ಹಂತಗಳಲ್ಲಿ 64 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ವಿಚ್ಛೇದಿತೆ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News