ಮಂಜನಾಡಿ: ಗ್ಯಾಸ್‌ ಸ್ಫೋಟ ಪ್ರಕರಣ; ಸಂತ್ರಸ್ತರ ಮನೆಗೆ ಸ್ಪೀಕರ್‌ ಯು ಟಿ ಖಾದರ್‌ ಭೇಟಿ

Update: 2024-12-28 09:09 GMT

ದೇರಳಕಟ್ಟೆ: ಗ್ಯಾಸ್ ಸೋರಿಕೆಯಿಂದ ಉಂಟಾದ ದುರಂತದಲ್ಲಿ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟ ಘಟನೆ ನಡೆದ ಮಂಜನಾಡಿ ಕಲ್ಕಟ್ಟದ ಮನೆಗೆ ಶನಿವಾರ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಗ್ಯಾಸ್ ಸೋರಿಕೆಯಿಂದ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಪರಿಹಾರ ಕ್ಕೆ ಸಂಬಂಧಿಸಿ ಶಿಷ್ಟಾಚಾರ ಪ್ರಕಾರ ದಾಖಲೆ ಸಹಿತ ವರದಿ ನೀಡಬೇಕು ಎಂದು ಸ್ಫೀಕರ್‌ ಅವರು ಎಚ್ ಪಿ ಗ್ಯಾಸ್ ನ ವಲಯ ಮಾರುಕಟ್ಟೆ ಸಿಬ್ಬಂದಿ ರಾಹುಲ್ ಗೆ ಸೂಚನೆ ನೀಡಿದರು. ಆಯಾ ಇಲಾಖಾಧಿಕಾರಿಗಳು ಆಯಾ ಇಲಾಖೆಗೆ ಸಂಬಂಧಿಸಿದ ವರದಿ ಶೀಘ್ರ ನೀಡಬೇಕು ಎಂದು ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಕಟ್ಟ ಸಮೀಪದ ಖಂಡಿಕ ಎಂಬಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ ಅನಾಹುತ ದಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದಿಬ್ಬರ ಚಿಕಿತ್ಸೆಗೆ ಪೂರ್ಣ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಯಲ್ಲಿದ್ದ ಇಬ್ಬರ ಪೈಕಿ ಒಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಬ್ಬಳು ಬಾಲಕಿಯ ಸ್ಥಿತಿ ಗಂಭೀರತೆಯಿಂದ ಇದ್ದು, ಚಿಕಿತ್ಸೆ ಮುಂದುವರಿದಿದೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪರಿಹಾರ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪರಿಹಾರ ಒಂದು ಗಂಟೆಯಲ್ಲಿ ನೀಡಬಹುದು. ಅದಕ್ಕೆ ಕಷ್ಟವಿಲ್ಲ.ಇಲ್ಲಿ ಪರಿಹಾರಕ್ಕಿಂತ ಚಿಕಿತ್ಸೆ ಮುಖ್ಯವಾಗಿದೆ. ಚಿಕಿತ್ಸೆಗೆ ವೈದ್ಯರ ಸಹಿತ ವ್ಯವಸ್ಥೆ ಮಾಡಲಾಗಿದೆ. ಮೊದಲು ಆಸ್ಪತ್ರೆಯಲ್ಲಿ ಇರುವವರು ಬದುಕಿ ಬರಬೇಕು. ಹುಬ್ಬಳ್ಳಿ ಯಲ್ಲಿ ನಡೆದ ಘಟನೆಯಲ್ಲಿ ತೊಂದರೆಗೊಳಗಾದದ್ದು ಒಂದೇ ಕುಟುಂಬದವರಲ್ಲ. ಆದ ಕಾರಣ ಪರಿಹಾರ ನೀಡಿದ್ದೇವೆ. ಈ ಹಿಂದೆ ಮದನಿನಗರ, ಹರೇಕಳದಲ್ಲಿ ದುರಂತ ಸಂಭವಿಸಿದಾಗ ಅದೇ ದಿನ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹರ್ಷವರ್ಧನ್, ತಹಶೀಲ್ದಾರ್ ಪುಟ್ಟ ರಾಜು, ಕಂದಾಯ ಅಧಿಕಾರಿ ಪ್ರಮೋದ್, ಎಚ್ ಪಿ ಗ್ಯಾಸ್ ವಲಯ ಮಾರುಕಟ್ಟೆ ಸಿಬ್ಬಂದಿ ರಾಹುಲ್, ಎಸಿಪಿ ಧನ್ಯ, ಕೊಣಾಜೆ ಇನ್ಸ್ಪೆಕ್ಟರ್ ರಾಜೇಂದ್ರ,ಸಬ್ ಇನ್ಸ್ಪೆಕ್ಟರ್ ನಾಗರಾಜ್, ಅಗ್ನಿ ಶಾಮಕ ದಳದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News