ಮನಪಾ: ಆಸ್ತಿ ತೆರಿಗೆ ಹೆಚ್ಚಳಕ್ಕೆ ಅಸ್ತು; ಶೇ. 3ರಷ್ಟು ಹೆಚ್ಚಳಕ್ಕೆ ಅನುಮೋದನೆ

Update: 2024-01-31 09:53 GMT

ಮಂಗಳೂರು, ಜ.31: ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಪರಿಷ್ಕೃತ ಮಾರುಕಟ್ಟೆ ದರಗಳನ್ನು ಅಳವಡಿಸಿ ಪರಿಷ್ಕೃತ ಆಸ್ತಿ ತೆರಿಗೆ ವಸೂಲಿ ಮಾಡಬೇಕೆಂಬ ಸರಕಾರದ ನಿರ್ಣಯದಂತೆ ಮಂಗಳೂರು ಮಹಾನಗರ ಪಾಲಿಕೆ ಆಡಳಿತವು ಶೇ. 3ರಷ್ಟು ತೆರಿಗೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೆಚ್ಚಳದ ನಿರ್ಣಯವನ್ನು ಅವಿರೋಧವಾಗಿ ಅನುಮೋದಿಸಲಾಯಿತು.

ಸಭೆಯಲ್ಲಿ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರು, ತೆರಿಗೆ ಪರಿಷ್ಕರಣೆ ಕುರಿತಾದ ಕಾರ್ಯಸೂಚಿ ಮಂಡಿಸಿದರು.

ಮನಪಾ ವ್ಯಾಪ್ತಿಯಲ್ಲಿ 2023-24ನೆ ಸಾಲಿಗೆ ಹೊಸ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಅಳವಡಿಸಿ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನವರಿ ತಿಂಗಳಿನಿಂದ ತೆರಿಗೆದಾರರು 2024-25ನೆ ಸಾಲಿನ ತೆರಿಗೆಯನ್ನು ಮುಂಗಡವಾಗಿ ಪಾವತಿಸಲು ಆಸಕ್ತಿ ವಹಿಸಿರುವುದರಿಂದ ಆನ್ಲೈನ್ ತಂತ್ರಾಂಶದಲ್ಲಿ ಪರಿಷ್ಕೃತ ಮಾರುಕಟ್ಟೆ ಮೌಲ್ಯ ಬಳಸಿ ಮುಂಗಡ ಪಾವತಿಗೆ ಅವಕಾಶ ಕಲ್ಪಿಸಬೇಕಾಗಿದೆ. ನಗರ ವ್ಯಾಪ್ತಿಯಲ್ಲಿ 1-10-2023ರಿಂದ ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳನ್ನು ಜಾರಿಗೆ ಮಾಡಲಾಗಿದೆ. ಸದ್ರಿ ಮಾರುಕಟ್ಟೆ ದರಗಳನ್ನು ಅಳವಡಿಸಿ ತಿದ್ದುಪಡಿ ಅಧಿನಿಯಮ 2021ರ ಪ್ರಕಾರ ನಿಗದಿಗೊಳಿಸಿರುವ ಮಾನದಂಡದಂತೆ ಆಸ್ತಿ ತೆರಿಗೆ ವಸೂಲಿ ಮಾಡಲು ಅನುಮೋದನೆ ನೀಡುವುದಾಗಿ ಮುಖ್ಯ ಸಚೇತಕರು ತಿಳಿಸಿದರು.

ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಆಧ್ಯಾದೇಶ, 2021ರ ಪ್ರಕಾರ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಅದರಂತೆ ಪ್ರತಿ ಹಣಕಾಸು ವರ್ಷದಲ್ಲಿ ಚಾಲ್ತಿ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಿ ಅಥವಾ ಮಾರ್ಗಸೂಚಿ ದರಗಳ ಪರಿಷ್ಕರಣೆ ಆಗದಿದ್ದರೆ ಪ್ರತಿ ವರ್ಷ ಶೇ. 3ರಷ್ಟು ಹೆಚ್ಚಳ ಮಾಡಿ ಆಸ್ತಿ ತೆರಿಗೆ ವಸೂಲು ಮಾಡಬೇಕಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಆಸ್ತಿ ತೆರಿಗೆ ಬಹು ಮುಖ್ಯ ಆದಾಯವಾಗಿರುವ ಹಿನ್ನೆಲೆಯಲ್ಲಿ ಕಾಯ್ದೆಗಳಲ್ಲಿ ತಿದ್ದುಪಡಿಯಾಗಿರುವ ಅಂಶಗಳನ್ನು ಪರಿಗಣಿಸಿ, ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಆಗದ ರೀತಿಯಲ್ಲಿ ತೆರಿಗೆ ವಿಧಿಸಲು ಕ್ರಮ ವಹಿಸುವಂತೆ 2021/2/19ರ ಸರಕಾರದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ತಿದ್ದುಪಡಿ ಕಾಯ್ದೆಯಂತೆ ಆಸ್ತಿ ತೆರಿಗೆ ನಿಗದಿಪಡಿಸಿ ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರಕಾರದ 15ನೆ ಹಣಕಾಸು ಆಯೋಗದ ಅನುದಾನ ಮತ್ತು ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ಅನುದಾನದ ಮೇಲೆ ಪರಿಣಾಮ ಬೀರಲಿದೆ. ಕಾಲಕಾಲಕ್ಕೆ ಆದಾಯದ ಮೂಲಗಳನ್ನು ಹೆಚ್ಚಿಸಲು ಕ್ರಮ ವಹಿಸದಿದ್ದಲ್ಲಿ ರಾಜ್ಯ ಹಣಕಾಸು ಆಯೋಗದ ಅನುದಾನವನ್ನು ತಡೆಹಿಡಿಯಲು ಕ್ರಮ ವಹಿಸಲು ಸೂಚಿರುವುದಾಗಿ ಅವರು ಈ ಸಂದರ್ಭ ವಿವರಿಸಿದರು.

ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ, ಪಾಲಿಕೆ ಆಯುಕ್ತ ಆನಂದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News