ಮೆಲ್ಕಾರ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ವಿರುದ್ಧ ಪ್ರತಿಭಟನೆ

Update: 2024-08-12 16:02 GMT

ಬಂಟ್ವಾಳ : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯ ವಿರುದ್ಧ ರಸ್ತೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಕಂಪೆನಿಯ ವಾಹನಗಳನ್ನು ಸಾರ್ವಜನಿಕರು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿ ನಡೆದಿದೆ.

ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಕಂಪೆನಿ ಆಗಾಗ ಭರವಸೆ ನೀಡುತ್ತಾರೆ ಮೇ ವಿನಃ ಇಲ್ಲಿನ ಸಮಸ್ಯೆ ಮಾತ್ರ ನಿತ್ಯ ನಿರಂತರವಾಗಿ ಕಳೆದ ಅನೇಕ ವರ್ಷಗಳಿಂದ ಸಾಗುತ್ತಾ ಬಂದಿದೆ. ಸಮಸ್ಯೆಯಿಂದ ಬಳಲಿ ರೊಚ್ಚಿಗೆದ್ದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು.

ಮಂಗಳೂರು-ಬೆಂಗಳೂರು ಜೊತೆಗೆ ಕೊಣಾಜೆ ಯೂನಿವರ್ಸಿಟಿ ಸಂಪರ್ಕದ ಕೇಂದ್ರ ಸ್ಥಾನವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಲ್ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ನಿತ್ಯ ಗೋಳು ತಪ್ಪಿದ್ದಲ್ಲ. ಮಳೆ ಬಂದರೆ ಕೆಸರು, ಮಳೆ ನಿಂತರೆ ಧೂಳಿನ ಸಮಸ್ಯೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕಂಪೆನಿ ವಿಫಲವಾದ ಹಿನ್ನೆಲೆಯಲ್ಲಿ ,ತಾಳ್ಮೆಯನ್ನು ಕಳೆದಕೊಂಡ ಇಲ್ಲಿನ ವ್ಯಾಪಾರಸ್ಥರು, ಅಂಗಡಿ ಮಾಲಕರು, ಮತ್ತು ಸಾರ್ವಜನಿಕರು ಸೇರಿ ಈ ದಾರಿಯಲ್ಲಿ ಸಂಚರಿಸುತ್ತಿದ್ದ ಕೇವಲ ಕಂಪೆನಿಯ ವಾಹನಗಳನ್ನು ಮಾತ್ರ ತಡೆದು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟವಾದ ದಿನದಂದು ಸಮಸ್ಯೆ ಬಗೆಹರಿಸುವ ಬಗ್ಗೆ ಮಾತು ಕೊಟ್ಟ ಬಳಿಕವೇ ತಡೆದ ವಾಹನಗಳನ್ನು ಹೋಗಲು ಬಿಡುವುದು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು.

ಕೊನೆಗೆ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಒಂದು ವಾರದೊಳಗೆ ಅಂದರೆ ಆ.18ರ ಬಳಿಕ ಮೆಲ್ಕಾರಿನಲ್ಲಿ ರಸ್ತೆಗೆ ಡಾಮರು ಹಾಕಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News