ಅಖಂಡ ಭಾರತದ ವಿಭಜನೆಯಿಂದಾಗಿ ಹಿಂದೂಗಳಿಗೆ ಸಮಸ್ಯೆಯಾಗಿದೆ: ಹರೀಶ್ ಪೂಂಜ
ಬೆಳ್ತಂಗಡಿ: ಕೇವಲ ಶಾಂತಿಯಿಂದ, ಚರಕ ತಿರುಗಿಸಿದ್ದರಿಂದ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, ಈ ದೇಶದ ಕ್ರಾಂತಿಕಾರಿಗಳ ಸಾಹಸದಿಂದ ಸ್ವಾತಂತ್ರ್ಯ ಬಂದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.
ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಅವರು ಪ್ರಚೋದನಕಾರಿಯಾಗಿ ಮಾತನಾಡಿದರು.
ಅಖಂಡ ಭಾರತದ ವಿಭಜನೆಯಿಂದಾಗಿ ಹಿಂದೂಗಳಿಗೆ ಸಮಸ್ಯೆಯಾಗಿದೆ, ಅದರಿಂದಾಗಿಯೇ ಬಾಂಗ್ಲಾದೇಶದ, ಪಾಕಿಸ್ತಾನದ ಹಿಂದೂಗಳಿಗೆ ಶೋಚನೀಯ ಸ್ಥಿತಿ ಬಂದಿದೆ. ಹಿಂದೂಗಳಿಗಿರುವ ಏಕೈಕ ದೇಶ ಭಾರತ. ಅಂದು ಹಿಂದೂಗಳಿಗೆ ಭಾರತ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ವಿಭಜನೆ ಮಾಡಿ, ದೇಶ ವಿಭಜನೆಯ ಹೆಸರಿನಲ್ಲಿ ಲಕ್ಷಾಂತರ ಹಿಂದೂಗಳ ಮಾರಣ ಹೋಮ ಆಗಿದೆ. ಅದನ್ನು ನಾವು ಇಂದು ನೆನೆಯಬೇಕಾಗಿದೆ. ಈಗ ಬಾಂಗ್ಲಾ ದೇಶದ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯಕ್ಕೆ ಅಂದು ನಾವು ಮಾಡಿದ ತಪ್ಪೇ ಕಾರಣವಾಗಿದೆ. ಬಹುಸಂಖ್ಯಾತ ಹಿಂದೂಗಳು ಭಾರತ ದಲ್ಲಿ ಅಲ್ಪಸಂಖ್ಯಾತರಾದರೆ ಬಾಂಗ್ಲಾದೇಶದ ಹಿಂದೂಗಳು ಅನುಭವಿಸುತ್ತಿರುವ ಸ್ಥಿತಿ ಭಾರತದಲ್ಲಿಯೂ ನಿರ್ಮಾಣ ವಾಗಲಿದೆ ಎಂಬುದನ್ನು ನೆನಪು ಮಾಡಬೇಕಾಗಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ, ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ ಎಂದು ಆರೋಪಿಸಿದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯರೂ ಸ್ವತಂತ್ರ ವಾಗಿ ಚಿಂತಿಸಿ ಯಾವುದೇ ತಾರತಮ್ಯವಿಲ್ಲದೆ ಸಮಾನತೆಯ ಆಧಾರದಲ್ಲಿ ಬದುಕನ್ನು ರೂಪಿಸುವ ಕಾರ್ಯವನ್ನು ಮಾಡುವಂತಾಗಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪ್ರದೀಪ್ ನಾವೂರು ಮಾತನಾಡಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನದ ಮೇಲೆ ಸ್ವತಂತ್ರ ಭಾರತ ನಿಂತಿದೆ. ಅದನ್ನು ತಿಳಿದುಕೊಂಡು ದೇಶವನ್ನು ಕಟ್ಟುವ ಕಾರ್ಯ ಮಾಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಇನ್ಸ್ಪೆಕ್ಟರ್ ಸುಬ್ಬಾಪುರ ಮಠ್ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಜಯಾನಂದ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.