ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆಗೆ ಹೆಚ್ಚಿದ ಬಲ: ಸಮಿತಿ ಸದಸ್ಯರಿಂದ ಸ್ಪೀಕರ್, ಕುಲಪತಿ ಸಹಿತ ಸಂಸ್ಥೆ ಮುಖಂಡರ ಭೇಟಿ

Update: 2024-10-04 12:05 GMT

ಮಂಗಳೂರು: ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕು ಎಂದು ಜನಾಭಿಪ್ರಾಯ ಮೂಡಿಸುವ ಉದ್ದೇಶದಿಂದ ಹೋರಾಟ ಸಮಿತಿ ಸಂಚಾಲಕ, ಎಂಎಲ್‌ಸಿ ಐವನ್ ಡಿಸೋಜ ನೇತೃತ್ವದಲ್ಲಿ ನಾಡಿನ ಗಣ್ಯರು, ಜನಪ್ರತಿನಿಧಿಗಳು, ವಿವಿಧ ವರ್ಗದ ಜನರು, ಸಂಘಸಂಸ್ಥೆಗಳ ಮುಖಂಡರನ್ನು ಭೇಟಿಯಾಗುವ ಕೆಲಸ ಶುಕ್ರವಾರ ನಗರದಲ್ಲಿ ನಡೆದಿದೆ.

ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅವರನ್ನು ಹೋರಾಟ ಸಮಿತಿ ನಿಯೋಗ ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ಸರ್ಕಾರಿ ಅತಿಥಿಗೃಹದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಪ್ರೊ.ಪಿ.ಎಲ್. ಧರ್ಮ , ಅವರನ್ನು ಭೇಟಿ ಮಾಡಿದ ನಿಯೋಗ ಸಂತ ಅಲೋಶಿಯಸ್ ಕಾಲೇಜು, ಬೆಸೆಂಟ್ ಮಹಿಳಾ ಕಾಲೇಜು ಗಳಲ್ಲಿ ಸಮಾಲೋಚನೆ ಸಭೆ ನಡೆಸಿದರು.

ಐವ್ ಡಿಸೋಜ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ನಿಕಟಪೂರ್ವ ಅಧ್ಯಕ್ಷ ಪೃಥ್ವಿರಾಜ್ ರೈ, ಕಾರ್ಯದರ್ಶಿ ಶ್ರೀಧರ ಎಚ್., ಕೋಶಾಧಿಕಾರಿ ಗಿರೀಶ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ಜತೆ ಕಾರ್ಯದರ್ಶಿ ಜ್ಯೋತಿ, ಹಿರಿಯ ವಕೀಲರಾದ ಎಂ.ಪಿ. ನೊರೊನ್ಹಾ, ದಿವಾಕರ ವಿ ನಿಯೋಗದಲ್ಲಿದ್ದರು.

ಬಳಿಕ ಮಾತನಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಹೈಕೋರ್ಟ್ ಪೀಠ ಸ್ಥಾಪನೆ ಅಭಿಯಾನ ಸಂಬಂಧಿಸಿ ಮಂಗಳೂರು ವಕೀಲರ ಸಂಘದ ಸದಸ್ಯರು ಆಗಿರುವ ಸ್ಪೀಕರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಇದು ಮುಖ್ಯ. ಎಲ್ಲರೂ ಜತೆ ಸೇರಿ ಮಾಡೋಣ ಎನ್ನುವ ಭರವಸೆ ಯನ್ನು ಅವರು ನೀಡಿದ್ದಾರೆ. ಅಕ್ಟೋಬರ್ ೧೭ ರಂದು ಕಾನೂನು ಹಾಗೂ ಸಂಸದೀಯ ಖಾತೆಗಳ ವ್ಯವಹಾರ ಖಾತೆ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿಯಾಗುವ ಕುರಿತು ಮಾತುಕತೆ ನಡೆದಿದೆ. ಕರ್ನಾಟಕ ಹೈಕೋರ್ಟ್‌ನ ಚೀಫ್ ಜಸ್ಟಿಸ್ ಅವರನ್ನು ಕೂಡ ಭೇಟಿಯಾಗುವ ಉದ್ದೇಶವಿದೆ ಎಂದರು.

ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲಾಗಿದೆ. ಆದರೆ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆ ಇರುವ ಮಂಗಳೂರು ಕೇಂದ್ರೀಕರಿಸಿ ಮಂಗಳೂರು ನಲ್ಲಿ ಪೀಠ ಸ್ಥಾಪನೆ ಮಾಡುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಿಂದ ಎಲ್ಲ ವಿಭಾಗದ ಕಕ್ಷಿದಾರರಿಗೆ ಅನುಕೂಲವಾಗಲಿದೆ. ಇದು ತ್ವರಿತ ನ್ಯಾಯದಾನ, ನ್ಯಾಯದಾನ ಮನೆಬಾಗಿಲಿಗೆ ಎನ್ನುವ ಆಶಯಗಳಿಗೆ ಪೂರಕವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News