ದಿ.ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ

Update: 2024-11-01 15:15 GMT

ಉಳ್ಳಾಲ: ಕವಿ, ಕಥೆಗಾರ, ನಟ, ನಿರೂಪಕನಾಗಿದ್ದ ಮನೋಹರ ಪ್ರಸಾದ್ ಅವರು ಕೇವಲ ಪತ್ರಕರ್ತರಲ್ಲದೆ ಜಿಲ್ಲೆಯಲ್ಲೇ ಓರ್ವ ಪ್ರಸಿದ್ಧ ಸೆಲೆಬ್ರಿಟಿಯಾಗಿ ಮಿಂಚಿದ್ದರು ಎಂದು ಮಂಗಳೂರು ಪ್ರೆಸ್ ಕ್ಲಬ್‌ ನ ಅಧ್ಯಕ್ಷ ,ಪತ್ರಕರ್ತ ಪಿ.ಬಿ.ಹರೀಶ್ ರೈ ಅಭಿಪ್ರಾಯ ಪಟ್ಟರು.

ಅವರು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ‌ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರ ಕುತ್ತಾರುವಿನ ಖಾಸಗಿ ಸಭಾಂಗಣದಲ್ಲಿ ನಡೆದ ಪತ್ರಿಕಾರಂಗದ ಭೀಷ್ಮ ದಿ.ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಪೊಲೀಸ್ ಮತ್ತು ಪತ್ರಕರ್ತರು ವೃತ್ತಿಯಲ್ಲಿರುವಷ್ಟು ದಿನ ಮಾತ್ರವೇ ಸಮಾಜದಲ್ಲಿ ಅವರಿಗೆ ಗೌರವ ಸಿಗುತ್ತದೆ.ಆದರೆ ಪತ್ರ ಕರ್ತ ಮನೋಹರ ಪ್ರಸಾದ್ ನಿಧನ ಹೊಂದಿದರೂ ಅವರನ್ನು ಸಂಸ್ಮರಣೆ ನಡೆಸಿರುವುದು ಶ್ಲಾಘನೀಯ. ಮನೋಹರ್ ಅವರು ಉತ್ತಮ ವರದಿಗಾರರಾಗಿಲ್ಲದೆ ಬಹುಮುಖ ಪ್ರತಿಭೆಯಾಗಿದ್ದು,ಕವಿ,ಕಥೆಗಾರರಾಗಿದ್ದರು. ಸುಲಲಿತ, ಸ್ಪಷ್ಟವಾಗಿ ಮಾತನಾಡುತ್ತಿದ್ದ ಅವರು ಕನ್ನಡ ಭಾಷೆಗೆ ಅಧ್ಭುತ ಕೊಡುಗೆ ನೀಡಿದ್ದಾರೆ.

ಒಳ್ಳೆಯ ಉಪನ್ಯಾಸಕರೂ ಆಗಿದ್ದ ಅವರು ಸಿನೆಮಾಗಳಲ್ಲೂ ನಟಿಸಿದಲ್ಲದೆ,ನಾಟಕ ಬರೆದು ,ಯಕ್ಷಗಾನಗಳಲ್ಲೂ ಅಭಿನಯಿ ಸಿದ್ದರು. ಪತ್ರಕರ್ತರ ಸೇವೆಯನ್ನೂ ಪರಿಗಣಿಸಿ ಸರಕಾರವು ಅಂತ್ಯ ಸಂಸ್ಕಾರದಲ್ಲಿ ಸರಕಾರಿ ಗೌರವ ಸಲ್ಲಿಸುತ್ತದೆ ಎಂಬುದಕ್ಕೆ ಮನೋಹರ್ ಪ್ರಸಾದ್ ಅವರೇ ನಿದರ್ಶನ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇವಲ ಭಾಷೆಗೋಸ್ಕರ ದಿನಾಚರಣೆಗಳು ಆಗಬಾರದು.ಕನ್ನಡ ರಾಜ್ಯೋತ್ಸವ ಆಚರಣೆಗಳ ಮುಖೇನ ನಾಡಿನ ಸಂಸ್ಕೃತಿಯನ್ನ ನಿರಂತರವಾಗಿ ಎತ್ತಿ ಹಿಡಿಯ ಬೇಕಿದೆ.ಸಾಮಾಜಿಕ ಜಾಲತಾಣಗಳು ಹುಟ್ಟಿಕೊಳ್ಳುವ ಮೊದಲೇ ನಾಡಿನ ಸಂಸ್ಕೃತಿಯನ್ನ ಎಲ್ಲೆಡೆಗೆ ಪಸರಿಸುವ ಕಾರ್ಯವನ್ನ ಪತ್ರಕರ್ತರು ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಖ್ಯಾತ ಹಿರಿಯ ಪತ್ರಕರ್ತರು, ಸಾಹಿತಿಗಳಾದ ಮಲಾರ್ ಜಯರಾಮ ರೈ,ಮಾಧ್ಯಮ ಹಿರಿಯ ಛಾಯಾಗ್ರಾಹಕ ಜಯಂತ್ ಉಳ್ಳಾಲ್,ವೃತ್ತಿಪರ ಹಿರಿಯ ಛಾಯಾಗ್ರಾಹಕ ಜಾನ್ ಡಿಸೋಜ ರನ್ನು ಸನ್ಮಾನಿಸಲಾಯಿತು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ,ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ವಲಯದ ಉಪಾಧ್ಯಕ್ಷ ರಾಜೇಶ್ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ,ಹೈದರ್ ಪರ್ತಿಪ್ಪಾಡಿ, ಉಪಾಧ್ಯಕ್ಷರಾದ ಆಲಿಯಬ್ಬ ಮತ್ತು ದೇವಕಿ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಅನುಪಮ, ಕೆ.ಎಮ್.ಕೆ ಮಂಜನಾಡಿ ಮತ್ತು ಶಶಿಕಾಂತಿ ಉಳ್ಳಾಲ್ ಅವರು ಸನ್ಮಾನಿತರನ್ನು ಪರಿಚಯಿಸಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು. ಮಲ್ಲಿಕಾ ಭಂಡಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News