ಬಂಟ್ವಾಳ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭ

Update: 2024-11-01 16:01 GMT

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ದೃಷ್ಟಿಯಿಂದ ಈ ತನಕ ತಾಲೂಕು ಕ್ರೀಡಾಂಗಣ ಆಗದೇ ಇರುವುದು ಖೇದಕರ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಜತೆ ಗೂಡಿ ಸಂಘಟಿತ, ರಾಜಕೀಯ ರಹಿತ ಪ್ರಯತ್ನ ನಡೆಸಿ ಮುಂದಿನ ರಾಜ್ಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಕುರಿತು ಶುಭ ಸುದ್ದಿ ಬರುವಂತಾಗಬೇಕು ಎಂದು ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಹೇಳಿದರು.

ಅವರು ಶುಕ್ರವಾರ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡರು.

ಧ್ವಜಾರೋಹಣ ನೆರವೇರಿಸಿದ ಪ್ರಭಾರ ತಹಶೀಲ್ದಾರ್ ಅರವಿಂದ್ ಕೆ.ಎಂ. ಅವರು ಮಾತನಾಡಿ, ಕನ್ನಡವು ಭಾಷೆಯ ಜತೆಗೆ ನಮ್ಮ ಭಾವನೆಯಾಗಿದ್ದು, ಕನ್ನಡ ಬಿಟ್ಟು ಆಂಗ್ಲ ಮಾಧ್ಯಮ ಬೋಧನೆ ಸರಿಯಲ್ಲ. ಯಾವುದೇ ಮಾಧ್ಯಮದ ಶಿಕ್ಷಣ ವಾದರೂ ಕನ್ನಡ ಅದರ ಜತೆಗಿರಬೇಕು. ಭಾಷೆಯ ಉತ್ತೇಜನ ಯಾವತ್ತೂ ಕಡಿಮೆಯಾಗಬಾರದು ಎಂದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿ ಮಾಡಿ ಸಮಾಜಕ್ಕೆ ಅರ್ಪಿಸಬೇಕು ಎಂದರು. ವಾಮದಪದವು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅಂಕಿತಾ ಪ್ರಧಾನ ಭಾಷಣ ಮಾಡಿ, ನಾವು ಯಾವುದೋ ಭಾಷೆಯಲ್ಲಿ ಮಾತನಾಡಿ ಕನ್ನಡವನ್ನು ಉಳಿಸುವುದು ಅಸಾಧ್ಯ ವಾಗಿದ್ದು, ಕನ್ನಡ ಮಾತನಾಡಿದಾಗಲೇ ಅದು ಉಳಿವು ಸಾಧ್ಯವಾಗುತ್ತದೆ. ಕವಿವಾಣಿಗಳು ಕನ್ನಡದ ಸೌಂದರ್ಯವನ್ನು ಹೆಚ್ಚಿಸಿದ್ದು, ಅದು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕಿದೆ ಎಂದರು.

ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಉಪಸ್ಥಿತರಿದ್ದರು.

ಇದೇ ವೇಳೆ ಪೊಲೀಸ್ ಇಲಾಖೆ, ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಲೂಕಿನ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ತಾ.ಪಂ. ಅನುದಾನದಲ್ಲಿ ಟಿ-ಶರ್ಟ್ ವಿತರಿಸಲಾಗಿದ್ದು, ಶಿಕ್ಷಕ ಜಯರಾಮ್ ಮಕ್ಕಳ ವಿವರ ನೀಡಿದರು. ಬಂಟ್ವಾಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಚಿನ್‌ ಕುಮಾರ್ ಸ್ವಾಗತಿಸಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ವಂದಿಸಿದರು. ಉಪ ತಹಶೀಲ್ದಾರ್ ನವೀನ್‌ ಕುಮಾರ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News