‘ಪಿಎಂ-ವಿದ್ಯಾಲಕ್ಷ್ಮೀ’ ಯೋಜನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸು: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಕೇಂದ್ರ ಸರಕಾರ ಪ್ರಾರಂಭಿಸುತ್ತಿರುವ ಹೊಸ ಪಿಎಂ-ವಿದ್ಯಾಲಕ್ಷ್ಮೀ ಯೋಜನೆಯು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹು ದೊಡ್ಡ ವರದಾನವಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪಿಎಂ ವಿದ್ಯಾಲಕ್ಷ್ಮೀ ಎನ್ನುವ ಬಹಳ ಉಪಯುಕ್ತ ಯೋಜನೆಗೆ ಅನುಮೋದನೆ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಸಂಸದರು, ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮೀ ಯೋಜನೆ ರಾಷ್ಟ್ರೀಯ ಶಿಕ್ಷಣ ನೀತಿಯ ಮತ್ತೊಂದು ಪ್ರಮುಖ ಕೊಡುಗೆಯಾಗಿದೆ. ಈ ಯೋಜನೆ ಯಡಿ ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಬಡ ಕುಟುಂಬಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವುದಕ್ಕೆ ಸುಲಭ ಹಾಗೂ ತ್ವರಿತಗತಿಯಲ್ಲಿ ಹಣಕಾಸಿನ ನೆರವು ಲಭ್ಯವಾಗಲಿದೆ.
ಪಿಎಂ ವಿದ್ಯಾಲಕ್ಷ್ಮ್ಮಿ ಯೋಜನೆಯಡಿ ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ 7.5 ಲಕ್ಷ ರೂ. ವರೆಗೆ ಬ್ಯಾಂಕ್‌ಗಳಿಂದ ಯಾವುದೇ ಭದ್ರತೆಯಿಲ್ಲದೆ(ಕೊಲಾಟರಲ್ ರಹಿತ) ಸಾಲ ನೀಡಲಾಗುತ್ತದೆ. ಈ ಸಾಲದ ಶೇ.75ರಷ್ಟು ಮೊತ್ತಕ್ಕೆ ಸರಕಾರವೇ ಬ್ಯಾಂಕ್‌ಗಳಿಗೆ ಖಾತರಿ ನೀಡಲಿದೆ. ಅಲ್ಲದೆ 8 ಲಕ್ಷ ರೂ.ಗಿಂತ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ನೀಡಲಿದ್ದು, ಅದಕ್ಕೆ ಶೇ.3ರಷ್ಟು ಬಡ್ಡಿ ವಿನಾಯಿತಿ ಕೂಡ ದೊರೆಯಲಿದೆ. ಶೀಘ್ರದಲ್ಲೇ ದೇಶದೆಲ್ಲೆಡೆ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಅರ್ಹ ವಿದ್ಯಾರ್ಥಿಗಳು ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಹೊಸ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಚೌಟ ಅವರು ಕರೆ ನೀಡಿದ್ದಾರೆ.