ಮುಲ್ಕಿ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಸೆರೆ
ಮುಲ್ಕಿ: ಇಲ್ಲಿನ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿಯ ಮನೆಯೊಂದರಿಂದ ಚಿನ್ನಾಭರಣ ಕಳವು ಗೈದಿದ್ದ ಆರೋಪಿಯೋರ್ವನನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿ ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಅರುಣ್ (20) ಎಂದು ತಿಳಿದು ಬಂದಿದೆ. ಆರೋಪಿಯಿಂದ ಕಳವುಗೈದಿದ್ದ 2.56 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಐ.ಪಿ.ಎಸ್ ಅವರ ಮಾರ್ಗದರ್ಶನ ದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಮುಲ್ಕಿ ಠಾಣಾ ನಿರೀಕ್ಷಕರಾದ ವಿದ್ಯಾಧರ ಡಿ ಬಾಯ್ಕರಿಕರ್ ಅವರು ಕಾರ್ಯಾಚರಣೆ ನಡೆಸಿದ್ದು ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ. ಅನಿತಾ ಎಚ್.ಬಿ, ಎ.ಎಸ್.ಐ ಹರಿಶೇಖರ್, ಹೆಡ್ ಕಾನ್ ಸ್ಟೇಬಲ್ ಶಶಿಧರ, ಚಂದ್ರಶೇಖರ್, ಜಾಯ್ಸ್ ಸುಚಿತಾ ಡಿ ಸೋಜ, ಕಾನ್ ಸ್ಟೇಬಲ್ ಗಳಾದ ಸುನೀಲ್ ಮತ್ತು ಮ.ಪಿ.ಸಿ. ಚಿತ್ರಾ ರವರು ಸಹಕರಿಸಿರುತ್ತಾರೆ.