ಪಕ್ಷಿಕೆರೆ| ತಾಯಿ-ಮಗುವಿನ ಕೊಲೆ, ಪತಿ ಆತ್ಮಹತ್ಯೆ ಪ್ರಕರಣ: ಒಂದೇ ಚಿತೆಯಲ್ಲಿ ಮೂವರ ಅಂತ್ಯಸಂಸ್ಕಾರ
ಮುಲ್ಕಿ: ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂಬಾತನು ತನ್ನ ಪತ್ನಿ ಪ್ರಿಯಾಂಕ (28) ಮಗು ಹೃದಯ್ (4) ಹತ್ಯೆಗೈದು ತಾನೂ ರೈಲಿನಡಿ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ಅಂತ್ಯ ಸಂಸ್ಕಾರ ಮುಲ್ಕಿ ಸಮೀಪದ ಕೆರೆಕಾಡು ಹಿಂದೂ ರುದ್ರ ಭೂಮಿಯಲ್ಲಿ ನೆರವೇರಿತು.
ಹಿಂದೂ ರುದ್ರ ಭೂಮಿಯಲ್ಲಿ ಮೂವರ ಮೃತ ದೇಹವನ್ನು ಒಂದೇ ಚಿತೆಯಲ್ಲಿಟ್ಟು ದಹನ ಕಾರ್ಯ ನಡೆಯುತ್ತಿದ್ದಂತೆ ಮನೆಯವರ ರೋದನ ಮುಗಿಲು ಮುಟ್ಟಿತು. ಎರಡು ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಆರೋಪಿ ಕಾರ್ತಿಕ್ ಭಟ್ ಹಣಕಾಸಿನ ಮುಗ್ಗಟ್ಟು ಎದುರಾಗಿದ್ದು ಮಾನಸಿಕ ಖಿನ್ನತೆಯಿಂದ ಸಂಸಾರ ಕಲಹದಿಂದ ಕೊಲೆ ನಡೆದಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಮೃತ ಕಾರ್ತಿಕ್ ಭಟ್ ತಂದೆ ಜನಾರ್ಧನ ಭಟ್ ಹಾಗೂ ತಾಯಿ ಶ್ಯಾಮಲಾ ಭಟ್ ಪಕ್ಷಿಕೆರೆ ಜಂಕ್ಷನ್ ಬಳಿಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದು ತಂದೆ ತಾಯಿ ಹೋಟೆಲ್ ಗೆ ಹೋದ ಬಳಿಕ ಏಕಾಏಕಿ ಪತ್ನಿಗೆ ಕಿಟಿಕಿಯ ಗಾಜಿನ ತುಂಡಿನಿಂದ ಕುತ್ತಿಗೆಗೆ, ಬೆನ್ನಿಗೆ, ಕುತ್ತಿಗೆಗೆ ಹಾಗೂ ಕಾಲಿಗೆ ಇರಿದಿದ್ದಾನೆ ಹಾಗೂ ಮಗುವಿನ ಕುತ್ತಿಗೆಗೆ ಇರಿದು ಸಾಯಿಸಿ ಡೆತ್ ನೋಟ್ ಬರೆದಿಟ್ಟು ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿ ಕೊನೆಗೆ ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದ ಬಳಿಯಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಷಿಕೆರೆಯ ಗ್ರಾಮೀಣ ಪ್ರದೇಶದಲ್ಲಿ ನಡೆದ ಭೀಕರ ಕೊಲೆ ಸ್ಥಳೀಯರನ್ನು ಕಂಗಡಿಸಿದ್ದು ಪರಿಸರದಲ್ಲಿ ನೀರವ ಮೌನ ಆವರಿಸಿದೆ. ಎರಡು ವರ್ಷದ ಹಿಂದೆ ಕಿನ್ನಿಗೋಳಿ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಹೊಸ ಕಾವೇರಿ ಎಂಬಲ್ಲಿ ತಾಯಿ ತನ್ನ ಮೂವರು ಕಂದಮ್ಮಗಳನ್ನು ಬಾವಿಗೆ ದೂಡಿ ಕೊಲೆಗೈದ ಪ್ರಕರಣ ಮಾಸುವ ಮುನ್ನವೇ ಇದೀಗ ನಡೆದ ಭೀಕರ ಘಟನೆ ಜನರನ್ನು ಕಂಗೆಡಿಸಿದೆ.