ತುಳುಕೂಟ ಕುವೈತ್‌ಗೆ ಬೆಳ್ಳಿಹಬ್ಬದ ಸಂಭ್ರಮ: ವಿವಿಧ ಕಾರ್ಯಕ್ರಮ ಆಯೋಜನೆ
ಮಂಗಳೂರು,ಅ.11: ತುಳುಕೂಟ ಕುವೈತ್ ಬೆಳ್ಳಿಹಬ್ಬದ ಪ್ರಯುಕ್ತ ಕುವೈತ್‌ನ ಹವಾಲಿಯ ಅಮೆರಿಕನ್ ಇಂಟರ್ನ್ಯಾಷನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಉತ್ಸವ ‘ತುಳು ಪರ್ಬ- 2024’ ಜರುಗಿತು.
ಬೆಳ್ಳಿಹಬ್ಬದ ಸ್ಮರಣಿಕೆಯನ್ನು ತುಳುನಾಡಿನ ಪ್ರಾಚೀನ ಕಲೆ ಪಾಡ್ದನ ಮೂಲಕ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸ ಲಾಯಿತು. ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಾರ್ಯಕ್ರಮಗಳು ತುಳು ಪರ್ಬದ ವಿಶೇಷ.
ಕುವೈತ್ ಮತ್ತು ಭಾರತ ರಾಷ್ಟ್ರಗೀತೆಗಳೊಂದಿಗೆ ಕಾರ್ಯಕ್ರಮ ಚಾಲನೆ ಪಡೆಯಿತು. ಯಕ್ಷಗಾನ, ಕಂಸಾಳೆ, ಗೇನೊದ ನಡೆ ಮತ್ತು ಅತಿಥಿ ಕಲಾವಿದ ಡಾ.ದೇವದಾಸ್ ಕಾಪಿಕಾಡ್ ಅವರ ತಂಡದಿಂದ ‘ನಮಸ್ಕಾರ ಮಾಸ್ಟ್ರೆ’ ತುಳು ನಾಟಕ ಪ್ರದರ್ಶನಗೊಂಡಿತು.
ಜಾನಪದ ಸಂಶೋಧಕ ಡಾ.ಗಣೇಶ್ ಅಮೀನ್ ಸಂಕಮಾರ್, ರಂಗಭೂಮಿ ಕಲಾವಿದ ಡಾ.ದೇವದಾಸ್ ಕಾಪಿಕಾಡ್ ಮತ್ತು ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಮುಖ್ಯ ಅತಿಥಿಯಾಗಿದ್ದರು. ತುಳುಕೂಟ ಕುವೈತ್ ಅಧ್ಯಕ್ಷ ಅಬ್ದುಲ್ ರಝಾಕ್ ನಿಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.
2023-2024 ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತಮ್ಮ ಸಾಧನೆಗಾಗಿ ಪ್ರಶಸ್ತಿ ಪತ್ರ ಹಾಗು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೂಟದ 5 ಸಮಿತಿ ಸದಸ್ಯರನ್ನು ಅತ್ಯುತ್ತಮ ಸೇವೆಗಾಗಿ ಸನ್ಮಾನಿಸಲಾಯಿತು.
ದೀಪಕ್ ಅಂದ್ರಾದೆ ಮತ್ತು ಅಶ್ವಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ತುಳು ಕೂಟ ಕುವೈತ್ ಉಪಾಧ್ಯಕ್ಷ ಶಂಕರ್ ಶೆಟ್ಟಿ ಸ್ವಾಗತಿಸಿದರು. ಸನ್ಮಾನ ಕಾರ್ಯಕ್ರಮವನ್ನು ಡಾ.ಪ್ರೀತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.