ಕುಳಾಯಿ - ಸುರತ್ಕಲ್‌ ರೈಲ್ವೆ ಮೇಲ್ಸೇತುವೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

Update: 2024-11-12 15:41 GMT

ಸುರತ್ಕಲ್‌: ಕುಳಾಯಿ ಮತ್ತು ಸುರತ್ಕಲ್‌ ರೈಲ್ವೇ ಮೇಲ್ಸೇತುವೆ ಶೀಘ್ರ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಕಾನ ಘಟಕ ಮತ್ತು ಕಾನ ಮತ್ತು ಕಾರ್ಗೋ ಗೇಟ್ ಆಟೊ ರಿಕ್ಷಾ ಚಾಲಕರ ಸಂಘದ ವತಿಯಿಂದ ಮಂಗಳವಾರ ಕಾನ ಜಂಕ್ಷನ್‌ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್‌, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಅವಧಿಯಲ್ಲಿ ಅಂದಿನ ಶಾಸಕ ಮೊಯ್ದೀನ್‌ ಬಾವ ಅವರು 60 ಕೋಟಿ ರೂ. ಅನುದಾನ ತರಿಸಿಕೊಂಡು ಶಷ್ಟಥ ರಸ್ತೆಗೆ ಚಾಲನೆ ನೀಡಿದ್ದರು. ಆ ಬಳಿಕ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರದಲ್ಲಿ ಶಾಸಕರಾದ ಭರತ್‌ ಶೆಟ್ಟಿ ಅವರು ಕಾಮಗಾರಿಗೆ ಬಂದಿದ್ದ 60ಕೋ. ರೂ. ಯಲ್ಲಿ 20 ಕೋಟಿ ಮಾತ್ರ ಬಳಸಿಕೊಂಡು ಚತುಷ್ಪಥ ರಸ್ತೆಗೆ ಚಾಲನೆ ನೀಡಿದರು. ಆದರೆ ಈ ವರೆಗೂ ರಸ್ತೆ ಕಾಗಾರಿ ಪೂರ್ಣಗೊಂಡಿಲ್ಲ. ಈ ರಸ್ತೆ ಶಾಸಕ ಭರತ್‌ ಶೆಟ್ಟಿಯವರ ರಾಜಕಾರಣಕ್ಕೆ ಕೈಗನ್ನಡಿ ಹಿಡಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುರತ್ಕಲ್‌ ಕಾನ ಎಂಆರ್‌ ಪಿಎಲ್‌ ರಸ್ತೆ ಕಾಮಗಾರಿಯ ಗುತ್ತಿಗೆದಾರ ಕಾಂಗ್ರೆಸ್ ಮುಖಂಡನಾಗಿದ್ದರೆ, ಬಿಜೆಪಿ ಮುಖಂಡರೊಬ್ಬರ ಸಹೋದರ ಈ ಕಾಮಗಾರಿಯನ್ನು ಮಾಡಿದ್ದಾರೆ. ಬಿಜೆಪಿ- ಕಾಂಗ್ರೆಸ್‌ ಭಾಯ್‌ ಬಾಯ್‌ ಗಳಾಗಿ ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಬ್ರಷ್ಟಾಚಾರ ನಡೆದಿರುವ ಬಗ್ಗೆ ನಮಗೆ ಸಂಶಯವಿದೆ. ಬಿಜೆಪಿ ಕಾಂಗ್ರೆಸ್‌ ನ ಹೊಂದಾಣಿಕೆಯ ಕೆಲಸ, ಮನಪಾದಲ್ಲೂ ಬಿಜೆಪಿಯದ್ದೇ ಅಧಿಕಾರ ಇದ್ದರೂ ಈ ಬಗ್ಗೆ ಶಾಸಕರು ಮಾತನಾಡುತ್ತಿಲ್ಲ. ಇದು ಅವರೂ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರುವ ಬಗ್ಗೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕೆಂದು ಇಮ್ತಿಯಾಝ್‌ ಆಗ್ರಹಿಸಿದರು.

ಸಿಪಿಎಂ ಸುರತ್ಕಲ್ ಶಾಖೆ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಮಾತನಾಡಿ ಸುರತ್ಕಲ್ ಮತ್ತು ರೈಲ್ವೆ ಬ್ರಿಡ್ಜ್ ಮೇಲಿನ ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಸಮಸ್ಯೆಗೆ ಪರಿಹಾರ ಕಲ್ಪಿಸಲು ವಿಫಲರಾಗಿದ್ದಾರೆ ಕಾನ ರಸ್ತೆಯ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸಿ ಸಾವು ನೋವಿಗೆ ಕಾರಣವಾಗುತ್ತಿದೆ ಎಂದು ಆಪಾದಿಸಿದರು.

ಡಿವೈಎಫ್ಐ ಘಟಕ ಅಧ್ಯಕ್ಷರಾದ ಬಿಕೆ ಮಕ್ಸುದ್, ಐ ಮೊಹಮ್ಮದ್, ಖಾಲಿದ್ ಕೃಷ್ಣಾಪುರ, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ಮುಖಂಡರಾದ ನವಾಝ್ ಕುಳಾಯಿ, ಸಾದಿಕ್ ಕಿಲ್ಪಾಡಿ, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅಬ್ದುಲ್ ಬಷೀರ್ ಕಾನ, ಮಿಥುನ್, ಹಂಝ ಮೈಂದಗುರಿ,ಇಬ್ರಾಹಿಂ, ಸಾಮಾಜಿಕ ಕಾರ್ಯ‌ ಕರ್ತರಾದ ಬಿ.ಎಂ ಅಬೂಸಾಲಿ ಕೃಷ್ಣಾಪುರ, ಮೊಹಮ್ಮದ್ ಶರೀಫ್ ಕಾನ, ಫ್ರಾನ್ಸಿಸ್ ಕಾನ, ಲಾರಿ ಚಾಲಕರ ಸಂಘದ ಮುಖಂಡರಾದ ಆರಿಫ್ ಮಂಗಲಪೇಟೆ ಮುಂತಾದವರು ಉಪಸ್ಥಿತರಿದ್ದರು.

"ಸುರತ್ಕಲ್‌ ಮತ್ತು ಕುಳಾಯಿ ರೈಲ್ವೇ ಸೇತುವೆ, ಅಪೂರ್ಣ ರಸ್ತೆ ಕಾಮಗಾರಿ, ಸೂಕ್ತ ಚರಂಡಿ ಮತ್ತು ಬೀದಿ ದೀಪಗಳ ಮೂಲ ಸೌಕರ್ಯಗಳನ್ನೂ ಜನ ಸಾಮಾನ್ಯರಿಗೆ ಒದಗಿಸಲಾಗದಷ್ಟು ಶಾಸಕ ಭರತ್‌ ಶೆಟ್ಟಿ ಅವರು ಅಶಕ್ತರಾಗಿದ್ದಾರೆ. ಇದು ಅವರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ. ಸುರತ್ಕಲ್‌ ರೈಲ್ವೇ ಮೇಲ್ಸೇತುವೆ ಸಂಪೂರ್ಣ ಹದಗಟ್ಟಿದ್ದು, ವಾಹನ ಮತ್ತು ಪಾದಚಾರಿಗಳೂ ನಡೆದಾಡಲೂ ಸಾದ್ಯವಿಲ್ಲದಷ್ಟು ಕಟ್ಟು ಹೋಗಿದೆ. ಪ್ರತಿಭಟನೆಯ ಮಾತು ಕೇಳಿದಾಕ್ಷಣ ಎಚ್ಚೆತ್ತು ಕೊಲ್ಳುವ ಶಾಸಕರು, ತೇಪೆ ಹಚ್ಚಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇಂದು ಮಾಡಿರುವ ಪ್ರತಿಭಟನೆ ಸಾಂಕೇತ ಮಾತ್ರ. ವಾರದೊಳಗೆ ರಸ್ತೆ ಮತ್ತು ಮೇಲ್ಸೇತುವೆಯ ಕಾಮಗಾರಿ ಆರಂಭಿಸದಿದ್ದರೆ ಆಟೊ ರಿಕ್ಷಾ ಚಾಲಕರು, ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಡಿವೈಎಫ್‌ಐ ಶಾಸಕರ ಕಚೇರಿ, ಮನಪಾ ಕಚೇರಿಗೆ ಮುತ್ತಿಗೆ ಹೀಗೆ ವಿವಿಧ ವಿನೂತನ ರೀತಿಯಲ್ಲಿ ನಿರಂತರ ಪ್ರತಿಭಟನೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

-ಬಿಕೆ. ಇಮ್ತಿಯಾಝ್‌, ದ.ಕ. ಜಿಲ್ಲಾಧ್ಯಕ್ಷರು ಡಿವೈಎಫ್‌ಐ




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News