ʼಪೆಪೆರೆ ಪೆಪೆ ಢುಂ’ ಬ್ರಾಸ್ ಬ್ಯಾಂಡ್ ಸ್ಪರ್ಧೆ: ರಂಗ ತರಂಗ್ ಮಡಂತ್ಯಾರ್ ತಂಡಕ್ಕೆ ಪ್ರಶಸ್ತಿ

Update: 2024-11-12 16:38 GMT

ಮಂಗಳೂರು, ನ.12: ಕೆಲರಾಯ್ ಚರ್ಚ್ ಮೈದಾನದಲ್ಲಿ ನವೆಂಬರ್ 9-10 ರಂದು ನಡೆದ ಮೊದಲ ಆವೃತ್ತಿಯ ‘ಪೆಪೆರೆ ಪೆಪೆ ಢುಂ’ ಬ್ರಾಸ್ ಬ್ಯಾಂಡ್ ಅಂತಿಮ ಸ್ಪರ್ಧೆಯಲ್ಲಿ ‘ರಂಗ ತರಂಗ್ ಮಡಂತ್ಯಾರ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ರವಿವಾರ ರಾತ್ರಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಂಗ ತರಂಗ್ ಮಡಂತ್ಯಾರ್ ಗೆಲುವಿನ ನಗೆ ಬೀರಿತು. ಒಮ್ಜೂರ್ ಚೆ ದಿಂಡೆ ಮಾನಾಯ್, ಕೆಲರಾಯ್ ಚೆ ಕಾಜುಲೆ, ನೀರ್ಮಾರ್ಚಿಂ ತಾರಾಂ, ಮತ್ತು ಟೀಮ್ ಡುಮ್ ಡುಮ್ ಬಜ್ಪೆ ಎರಡನೇ ಸ್ಥಾನವನ್ನು ಹಂಚಿಕೊಂಡವು

ಫೆಬ್ರವರಿ ತಿಂಗಳ 1, 2, 3 ಮತ್ತು 4 ರಂದು ‘ಆಮಿ ಆನಿ ಆಮ್ಚಿಂ ಸಂಘಟನೆ ಏರ್ಪಡಿಸಿದ್ದ ಪ್ರಥಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ 5 ತಂಡಗಳು ಅಂತಿಮ ಹಂತದ ರೋಚಕ ಸ್ಪರ್ಧೆಗೆ ತೇರ್ಗಡೆಯಾಗಿತ್ತು. ಬ್ರಾಸ್ ಬ್ಯಾಂಡ್ ವಾದ್ಯದೊಂದಿಗೆ ನವ್ಯ ಪ್ರಯೋಗಗಳ ಅನಾವರಣಕ್ಕೆ ಈ ವೇದಿಕೆಯು ಸಾಕ್ಷಿಯಾಯಿತು.

ಮೊದಲ ಬಹುಮಾನ ವಿಜೇತ ತಂಡ ರಂಗ ತರಂಗ್ ಮಡಂತ್ಯಾರ್ ಪ್ರಶಸ್ತಿ ಫಲಕದೊಂದಿಗೆ 2 ಲಕ್ಷ ರೂ. ಬಹುಮಾನ ಪಡೆಯಿತು. ನಾಲ್ಕು ರನ್ನರ್-ಅಪ್ ತಂಡಗಳಿಗೆ ತಲಾ ರೂ 1 ಲಕ್ಷದೊಂದಿಗೆ ಪ್ರಶಸ್ತಿ ನೀಡಲಾಯಿತು.

ಮುಖ್ಯ ಅತಿಥಿಯಾಗಿದ್ದ ಎನ್‌ಆರ್‌ಐ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರು ಬಹುಮಾನದ ಮೊತ್ತವನ್ನು ಪ್ರಾಯೋ ಜಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ಬ್ರಾಸ್ ಬ್ಯಾಂಡ್ ಸಂಗೀತದ ಶ್ರೀಮಂತ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಮಿ ಆನಿ ಆಮ್ಚಿಂ ಸಂಘಟನೆ ‘ಪೆಪೆರೆ ಪೆಪೆ ಢುಂ’ ನಂತಹ ಕಾರ್ಯಕ್ರಮ ಆಯೋಜಿಸಿರುವುದನ್ನು ಶ್ಲಾಘಿಸಿದರು.

ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಕೂಟವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ರೋಚಕ ಬ್ರಾಸ್ ಬ್ಯಾಂಡ್ ಸಂಗೀತ, ಸಾಂಪ್ರದಾಯಿಕ ಗ್ರಾಮೀಣ ನೃತ್ಯಗಳನ್ನು ಆನಂದಿಸಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ಆಹಾರ ಮಳಿಗೆಯಲ್ಲಿ ಕರಾವಳಿಯ ರುಚಿಕರವಾದ ಭಕ್ಷಗಳ ನ್ನು ಸವಿದರು. ಪುಸ್ತಕ ಮಳಿಗೆಗಳನ್ನು ಈ ಸಂದರ್ಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಯ ಉಪನಿರ್ದೇಶಕಿ ಮಿಶಾಲ್ ಕ್ವೀನಿ ಡಿ ಕೋಸ್ಟಾ, ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿಸ್ಟರ್ ರೋಸ್ ಸೆಲಿನ್, ಕೆಲರಾಯ್ ಚರ್ಚ್‌ನ ಧರ್ಮಗುರು ಫಾ. ಸಿಲ್ವೆಸ್ಟರ್ ಡಿ ಕೋಸ್ತಾ, ಕಯ್ಯಾರ್ ಚರ್ಚ್‌ನ ಧರ್ಮಗುರು ಫಾ. ವಿಶಾಲ್ ಮೋನಿಸ್, ಫಜೀರ್ ಚರ್ಚ್‌ನ ಧರ್ಮಗುರು ಫಾ. ಜೋಸೆಫ್ ಮಸ್ಕರೇನ್ಹಸ್, ಉದ್ಯಮಿ ಫಿಲಿಪ್ ಡಿಸೋಜ, ಕೆಲರಾಯ್ ಚರ್ಚ್ ಉಪಾಧ್ಯಕ್ಷ ಸಂತೋಷ್ ಡಿ’ಕೋಸ್ತಾ, ಮಂಗಳೂರು ಪ್ಯಾಸ್ಟ್ರೋಲ್ ಕೌನ್ಸಿಲ್ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಡೈಜಿವರ್ಲ್ಡ್ ಟಿವಿ ಆಡಳಿತ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೋ ಮತ್ತಿತರರು ಉಪಸ್ಥಿತರಿದ್ದರು.

ಆಮಿ ಆನಿ ಅಮ್ಚಿಂ ಸಂಸ್ಥೆಯ ಅಧ್ಯಕ್ಷ ಡೆನಿಸ್ ಡಿಸಿಲ್ವ ಸ್ವಾಗತಿಸಿದರು. ಸಂತೋಷ್ ಡಿಕೋಸ್ತಾ ವಂದಿಸಿದರು. ವಿ.ಜೆ.ಡಿಕ್ಸನ್ ಮತ್ತು ಅರುಣ್ ಡಿಸೋಜ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು.











Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News