ಮಂಗಳೂರು| ಜನಪ್ರಿಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ನಗರ ಸ್ವಚ್ಛತಾ ಅಭಿಯಾನ

Update: 2024-11-12 17:29 GMT

ಮಂಗಳೂರು: ಪಡೀಲ್‌ನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ನಮ್ಮ ನಗರ ಸ್ವಚ್ಛ್ಚ ನಗರ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ರವಿವಾರ ಜನಪ್ರಿಯ ಆಸ್ಪತ್ರೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಾಧಕರಾದ ನಝೀರ್ ಬೆಂಗ್ರೆ ಮತ್ತು ಜಾರ್ಜ್ ಪಿವಿ ಅವರನ್ನು ಸನ್ಮಾನಿಸಲಾಯಿತು. ಡಾ. ಅಬ್ದುಲ್ ಬಶೀರ್ ವಿ.ಕೆ ಅವರ ನೇತೃತ್ವದಲ್ಲಿ ಪಡೀಲ್ ಸುತ್ತಮುತ್ತ ಹೆದ್ದಾರಿಯ ಪಕ್ಕದಲ್ಲಿ ಬಿದ್ದಿರುವ ಕಸ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.

ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿಕೆ ಮಾತನಾಡಿ ಕನ್ನಡ ನಾಡಿನಲ್ಲಿ ಎಲ್ಲವೂ ನಮಗೆ ದೊರೆತಿದ್ದು, ಕನ್ನಡದ ಬಗ್ಗೆ ಹೆಮ್ಮೆಯಾಗುತ್ತಿದೆ. ಕನ್ನಡ ನಾಡಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಹಾಸನದಲ್ಲಿ ಹಲವು ವರ್ಷಗಳಿಂದ ಕನ್ನಡ ಉಳಿಸಲು ಬೆಳೆಸಲು ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೀಗ ಮಂಗಳೂರಿನಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಪೋಟರ್ ಚಂದ್ರಾವತಿ ಮಾತನಾಡಿ ಆರೋಗ್ಯವಂತರಾಗಬೇಕಾದರೆ ಪರಿಸರ ಸ್ವಚ್ಚವಾಗಿಡಬೇಕು, ಹಾಸನದಲ್ಲಿ ಬಶೀರ್ ಅವರ ಸೇವೆ ಶ್ಲಾಘನೀಯ, ಇದೀಗ ಮಂಗಳೂರಿನಲ್ಲಿ ಇನ್ನಷ್ಟು ಸೇವೆ ನೀಡಲು ದೇವರು ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.

ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ ಹಾಸನದಲ್ಲಿ ಜನರ ಜನಮನ ಗೆದ್ದ ಬಶೀರ್ ಅವರು ನಮ್ಮ ಜಿಲ್ಲೆಯ ಜನಮನ ಗೆದ್ದಿದ್ದಾರೆ. ಸ್ವಚ್ಚತೆ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.

ಎಂ ಫ್ರೆಂಡ್ಸ್‌ನ ಸುಜಾ ಮಹಮ್ಮದ್, ಸಂತೋಷ್ ಶೆಟ್ಟಿ, ಸುರೇಶ್ ಆಚಾರ್, ದೇವಿಪ್ರಸಾದ್, ಶಾಕೀರ್ ಅಳಕೆಮಜಲು, ಅಬ್ದುಲ್ ಜಬ್ಬಾರ್ ಮಾರಿಪಳ್ಳ, ಮಹಮ್ಮದ್ ಶಾಕೀರ್, ಆರೀಫ್ ಪಡುಬಿದ್ರೆ, ಉಮ್ಮರ್ ಫಾರೂಕ್, ನಾಸಿರ್ ಕಂಬಳಬೆಟ್ಟು, ಶಾಕೀರ್ ಅಳಕೆಮಜಲು, ಮಹಮ್ಮದ್ ಕಂಬಳಬೆಟ್ಟು, ಗಫೂರ್ ಕಂಬಳಬೆಟ್ಟು ಉಪಸ್ಥಿತರಿದ್ದರು.

ಜನಪ್ರಿಯ ಆಸ್ಪತ್ರೆಯ ಸಿಇಓ ಡಾ. ಕಿರಾಸ್ ಪರ್ತಿಪ್ಪಾಡಿ ನಿರೂಪಿಸಿದರು. ಡಾ. ನೂಮನ್, ನೌಸಿನ್ ಬದ್ರಿಯಾ ಸಹಕರಿಸಿದರು. ಪುಟ್ಟಣ ಕುಲಾಲ್ ಪ್ರತಿಷ್ಠಾನ, ಎಂ ಫ್ರೆಂಡ್ಸ್ ಮಂಗಳೂರು, ಶಿವ ಫ್ರೆಂಡ್ಸ್ ಕ್ಲಬ್, ಎಸ್ ವೈ ಎಸ್ ಇಸಾಬ ದ.ಕ, ಹಿದಾಯ ಫೌಂಡೇಶನ್ ಮಂಗಳೂರು, ಕನ್ನಡ ಕಟ್ಟೆ ಮಂಗಳೂರು, ಎಸ್ಕೆಎಸ್‌ಎಸ್‌ಎಫ್ ವಿಖಾಯ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್, ಮಸೂದ್ ಕಾಲೇಜ್ ಆಫ್ ನರ್ಸಿಂಗ್‌ ಮಂಗಳೂರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದ ಒತ್ತಡ ಪರೀಕ್ಷೆ, ಶಸ್ತ್ರ ಚಿಕಿತ್ಸಾ ವೈದ್ಯರು, ಕಿಡ್ನಿ ಮತ್ತು ಮೂತ್ರಕೋಶ ತಜ್ಞರು, ಕೀಲು ಮೂಳೆ ಮತ್ತು ಬೆನ್ನು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞರು, ಕಿವಿ, ಮೂಗು ಗಂಟಲು ತಜ್ಞರು, ಪ್ರಸೂತಿ ಸ್ತ್ರೀರೋಗ, ಮಕ್ಕಳ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸಾ ತಜ್ಞರು ಭಾಗವಹಿಸಿದ್ದು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು. 





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News