ಬೊಂದೆಲ್ ಸಂತ ಲಾರೆನ್ಸರ ಚರ್ಚ್ ಗೆ ತ್ರಿವಳಿ ಸಂಭ್ರಮ
ಮಂಗಳೂರು, ನ.13: ಬಜ್ಪೆಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರಿನಿಂದ 8 ಕಿ.ಮೀ. ದೂರದ ಬೊಂದೆಲ್ ನ ಸಂತ ಲಾರೆನ್ಸರ ಚರ್ಚ್ನ ಶತಮಾನೋತ್ಸವ ಸಮಾರೋಪ, ನವೀಕೃತ ಚರ್ಚ್ನ ಉದ್ಘಾಟನೆ ಹಾಗೂ ಸಂತ ಲಾರೆನ್ಸರ ಅಧಿಕೃತ ಪುಣ್ಯ ಕ್ಷೇತ್ರ ಉದ್ಘಾಟನೆ, ಬಲಿಪೂಜೆ ನ. 18ರಂದು ನಡೆಯಲಿದೆ.
ಕಾರ್ಯಕ್ರಮದ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂ. ಆ್ಯಂಡ್ರೂ ಲಿಯೋ ಡಿಸೋಜ ಮಾಹಿತಿ ನೀಡಿದರು.
ಮಂಗಳೂರು ಧರ್ಮಪ್ರಾಂತದ ಬಿಷಪ್ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ, ವಿಶ್ರಾಂತ ಬಿಷಪ್ ಅತೀ ವಂ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜ, ಉಡುಪಿ ಧರ್ಮಪ್ರಾಂತದ ಬಿಷಪ್ ಅತೀ ವಂ. ಜೆರಾಲ್ಡ್ ಐಸಾಕ್ ಲೋಬೋ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಶತಮಾನದ ಹಿಂದೆ ಭಾರತಕ್ಕೆ ಆಗಮಿಸಿದ ಪ್ರೆಂಚ್ ಧರ್ಮಗುರು ವಂ. ಅಲೆಕ್ಸಾಂಡರ್ ದುಬೋಯ್ಸ್ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಅವರ ಮಾತೃಭಾಷೆ ಫ್ರೆಂಚ್ ನಲ್ಲಿ ಬೊನ್ ವೆಲ್ (ಅತೀ ಸುಂದರ) ಎಂದು ಪ್ರಶಂಸಿಸಿದ ಉದ್ಘಾರವೇ ಕಾಲಕ್ರಮೇಣ ಬೊಂದೆಲ್ ಎಂಬ ಹೆಸರಿಗೆ ಕಾರಣವಾಯಿತು ಎನ್ನುವುದು ಪ್ರತೀತಿ.
ಹಿಂದೆ ಈ ಪ್ರದೇಶದ ಕ್ರೈಸ್ತರು ತಮ್ಮ ಧಾರ್ಮಿಕ ಕಾರ್ಯಗಳಿಗಾಗಿ ಏಳೆಂಟು ಮೈಲುಗಳ ದೂರದ ಮಿಲಾಗ್ರಿಸ್ ಮತ್ತು ರೊಸಾರಿಯೋ ಚರ್ಚ್ ಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಕ್ರೈಸ್ತರ ಈ ಕಷ್ಟವನ್ನರಿತ ಮಿಲಾಗ್ರಿಸ್ ಚರ್ಚಿನ ಅಂದಿನ ಧರ್ಮಗುರು ವಂ. ಲುವಿಸ್ ಫೆರ್ನಾಂಡಿಸ್ ಅವರು ಪಚ್ಚನಾಡಿ ಗ್ರಾಮದ ಬಂಗೇರ ಸೀಮೆಯ ತೋಟದಲ್ಲಿ ಒಂದು ಪ್ರಾರ್ಥನಾಲಯ ನಿರ್ಮಿಸಿದರು.
1908ರಲ್ಲಿ ಸ್ಥಾಪನೆಯಾದ ಒಂದು ಶಾಲೆಯು ಆ ಜಾಗದಲ್ಲಿ ಇತ್ತು. ಮಿಲಾಗ್ರಿಸ್ ಚರ್ಚ್ ನ ಇನ್ನೋರ್ವ ಧರ್ಮಗುರು ವಂ.ಫ್ರ್ಯಾಂಕ್ ಪಿರೇರಾ ಅವರು ಶನಿವಾರ ಈ ಪ್ರಾರ್ಥನಾಲಯಕ್ಕೆ ಆಗಮಿಸಿ ರವಿವಾರದ ಬಲಿಪೂಜೆ ಹಾಗೂ ಇತರ ಧಾರ್ಮಿಕ ಕಾರ್ಯ ನೆರವೇರಿಸುತ್ತಿದ್ದರು.
ಕ್ರಮೇಣ 1913ರಲ್ಲಿ ಅವರು ಈ ಪ್ರಾರ್ಥನಾಲಯವನ್ನು ಶಾಲೆಯ ಸಮೇತ ಪ್ರಸಕ್ತ ಚರ್ಚ್ ಇರುವ ಜಾಗಕ್ಕೆ ಸ್ಥಳಾಂತರಿಸಿದರು. ಬಲಿಪೂಜೆ ಅರ್ಪಿಸಲು ಒಂದು ತಾತ್ಕಾಲಿಕ ಮುಳಿಹುಲ್ಲಿನ ಛಾವಣಿಯನ್ನು ನಿರ್ಮಿಸಿದರು ಹಾಗೂ ಶಾಲೆಗೆ ಒಂದು ಕಟ್ಟಡವನ್ನು ಕಟ್ಟಲು ಆರಂಭಿಸಿದರು. ಜನರ ನೆರವಿನಿಂದ 1915ರಲ್ಲಿ ಹೊಸ ಪ್ರಾರ್ಥನಾಲಯ ನಿರ್ಮಾಣವಾಯಿತು. 1917ರಲ್ಲಿ ಪ್ರಭಾರ ಧರ್ಮಗುರುಗಳಾಗಿ ನಿಯುಕ್ತಿಗೊಂಡ ವಂ. ಜುಲಿಯಾನ್ ಡಿಸೋಜ 1922ರಲ್ಲಿ ಮಿಲಾಗ್ರಿಸ್ ಚರ್ಚ್ ಸಹಕಾರದಿಂದ ಚಿಕ್ಕದಾಗಿದ್ದ ಬೊಂದೆಲ್ ದೇವಾಲಯದ ಕಟ್ಟಡವನ್ನು ದೊಡ್ಡದಾಗಿ ಕಟ್ಟಿಸಿದರು.
1923 ರಲ್ಲಿ ಅಂದಿನ ಬಿಷಪ್ ಅತೀ ವಂ. ಪಾವ್ಲ್ ಪೆರಿನಿ ಬೊಂದೆಲ್ ನಲ್ಲಿ ಆದ ಪ್ರಗತಿಯನ್ನು ಗಮಿನಿಸಿ 1923, ಮೇ 1 ರಂದು ಬೊಂದೆಲ್ ಒಂದು ಅಧಿಕೃತ ಚರ್ಚ್ ಎಂದು ಪ್ರಕಟಿಸಿ ಸಂತ ಲಾರೆನ್ಸರಿಗೆ ಸಮರ್ಪಿಸಿದರು ಹಾಗೂ ವಂ. ಫ್ರ್ಯಾಂಕ್ ಪಿರೇರಾರನ್ನು ಇಲ್ಲಿನ ಪ್ರಥಮ ಧರ್ಮಗುರುಗಳನ್ನಾಗಿ ನೇಮಿಸಿದರು. ಈ ಮೂಲಕ ಈವರೆಗೆ 12 ಪ್ರಧಾನ ಧರ್ಮಗುರುಗಳು ಹಾಗೂ ಅನೇಕ ಸಹಾಯಕ ಧರ್ಮಗುರುಗಳು ತಮ್ಮ ನಿಸ್ವಾರ್ಥ ಸೇವೆಯನ್ನು ಧಾರೆ ಎರೆದಿದ್ದಾರೆ ಎಂದು ವಂ. ಆ್ಯಂಡ್ರೂ ಲಿಯೋ ಡಿಸೋಜ ವಿವರ ನೀಡಿದರು.
ಚರ್ಚ್ ಅಧೀನದಲ್ಲಿ ಸಂತ ಲಾರೆನ್ಸರ ಹಿರಿಯ ಪ್ರಾಥಮಿಕ ಶಾಲೆ, ಸಂತ ಲಾರೆನ್ಸ್ ಇಂಗ್ಲೀಷ್ ಮೀಡಿಯಂ ನರ್ಸರಿ, ಪ್ರೈಮರಿ ಹಾಗೂ ಪ್ರೌಢಶಾಲೆ ಕೂಡಾ ಇದೆ. ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಶಾಲೆಗೆ 116 ವರ್ಷಗಳ ಇತಿಹಾಸವಿದೆ.
ಚರ್ಚ್ ನ ಶತಮಾನೋತ್ಸವದ ಸವಿನೆನಪಿಗಾಗಿ ಪ್ರಧಾನ ಧರ್ಮಗುರು ವಂ. ಆ್ಯಂಡ್ರ್ಯೂ ಲಿಯೋ ಡಿಸೋಜರವರ ನೇತೃತ್ವದಲ್ಲಿ ಬಡವರಿಗಾಗಿ ನಿರ್ಮಾಣಗೊಂಡ 3 ಮನೆಗಳು ಹಾಗೂ ನವೀಕೃತ ಚರ್ಚ್ನ ಸುಂದರ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಸಹಾಯಕ ಧರ್ಮಗುರು ವಂ. ವಿಲಿಯಂ ಡಿಸೋಜ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂತ ಲಾರೆನ್ಸ್ ಶಾಲೆಯ ಪ್ರಾಂಶುಪಾಲ ವಂ. ಪೀಟರ್ ಗೊನ್ಸಾಲ್ವಿಸ್, ಉಪಾಧ್ಯಕ್ಷ ಜಾನ್ ಡಿಸಿಲ್ವ, ಪುಣ್ಯಕ್ಷೇತ್ರ ಸಮಿತಿಯ ಸಂಯೋಜಕ ಪ್ರಕಾಶ್ ಪಿಂಟೋ, ಶತಮಾನೋತ್ಸವ ಸ್ಮರಣ ಸಂಚಿಕೆ ಸಂಪಾದಕಿ ಮೇರಿ ಮಿರಾಂದ, ಕಾರ್ಯಕ್ರಮ ಸಂಯೋಜಕಿ ಪ್ರೀತಿ ಡಿಸೋಜ ಉಪಸ್ಥಿತರಿದ್ದರು.