ಕನ್ನಡ ನಾಡು ನುಡಿಯ ಅಭಿಮಾನದ ಪ್ರತೀಕ ಕರ್ನಾಟಕ ಸುವರ್ಣ ಸಂಭ್ರಮ : ಡಾ. ಸಂತೋಷ್ ಕುಮಾರ್

Update: 2024-11-13 12:58 GMT

ಮಂಗಳೂರು: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಆಶಯದೊಂದಿಗೆ ನಡೆಯುತ್ತಿರುವ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮವು ನಮ್ಮ ರಾಜ್ಯ ಹಾಗೂ ಭಾಷೆಯ ಅಭಿಮಾನದ ಪ್ರತೀಕವಾಗಿದೆ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಹೇಳಿದರು.

ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ನಡೆಯುವ ಬಹುಸಂಸ್ಕೃತಿ ಉತ್ಸವದ ಅಂಗವಾಗಿ ನಗರದ ತುಳು ಭವನದಲ್ಲಿ ಬುಧವಾರ ನಡೆದ ಪ್ರೌಢಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯೋತ್ಸವ ಮೂಲಕ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅನ್ನುವುದನ್ನು ಸಂಭ್ರಮಿಸಿದವರು ನಾವು, ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಚಿತ್ರದ ಮೂಲಕ ಈ ಅರಿವು ಹಾಗೂ ಅಭಿಮಾನವನ್ನು ಬಿತ್ತೋಣ, ಆ ಮೂಲಕ ಬಹುಸಂಸ್ಕೃತಿಯ ಆಶಯವನ್ನು ಸಾರ್ಥಕಗೊಳಿಸೋಣ ಎಂದು ಡಾ. ಸಂತೋಷ್ ಕುಮಾರ್ ಹೇಳಿದರು.

ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಸುಮಂಗಳಾ ಎಸ್.ನಾಯಕ್ ಮತ್ತು ಹಿರಿಯ ಕಲಾವಿದ ಗಣೇಶ್ ಸೋಮಾಯಾಜಿ ಮಾತನಾಡಿದರು.

ಈ ಸಂದರ್ಭ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿ ನಿರ್ದೇಶಕ ಕೋಟಿ ಪ್ರಸಾದ್ ಆಳ್ವಾ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಾಲಸಾ ಚಿತ್ರಕಲಾ ಶಾಲೆಯ ವಿಭಾಗ ಮುಖ್ಯಸ್ಥ ಎನ್.ಎಸ್.ಪತ್ತಾರ್, ಆರ್ಟ್ ಕೆನರಾ ಟ್ರಸ್ಟ್ ಸದಸ್ಯ ಹರೀಶ್ ಕೊಡಿಯಾಲ್‌ಬೈಲ್ ಉಪಸ್ಥಿತರಿದ್ದರು.

ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಂಕಣಿ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಆಳ್ವಾರೀಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News