ವಿಕ್ರಂಗೌಡ ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೊಳಪಡಿಸಲು ಸಿಪಿಎಂ ಆಗ್ರಹ
ಮಂಗಳೂರು: ನಕ್ಸಲ್‌ವಾದಿ ವಿಕ್ರಂಗೌಡರ ಎನ್‌ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಸಿಪಿಎಂ ರಾಜ್ಯ ಸಮಿತಿ ಆಗ್ರಹಿಸಿದೆ.
ಪೊಲೀಸ್ ದಾಳಿಯಲ್ಲಿ ನಕ್ಸಲ್‌ವಾದಿ ವಿಕ್ರಂ ಗೌಡರ ಹತ್ಯೆಯಾಗಿದೆ ಎಂದು ರಾಜ್ಯ ಸರಕಾರ ಪ್ರಕಟಿಸಿದೆ. ಗುಂಡಿನ ಚಕಮಕಿಯಲ್ಲಿ ಈ ಹತ್ಯೆಯಾಗಿದೆ ಎಂದು ವಿವರಿಸಲಾಗಿದೆ. ಆದರೆ 50-60 ಜನರ ಸಶಸ್ತ್ರ ಪೋಲೀಸರ ತಂಡಕ್ಕೆ ನಾಲ್ಕು ಜನ ನಕ್ಸಲರ ತಂಡವನ್ನು ಬಂಧಿಸಲಾಗಲಿಲ್ಲವೆ ಎಂಬ ಪ್ರಶ್ನೆಯೊಂದಿಗೆ ಪೊಲೀಸ್ ಕ್ರಮದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆದ್ದರಿಂದ ರಾಜ್ಯದ ಜನತೆ ಸತ್ಯಾಂಶ ತಿಳಿಯುವಂತಾಗಲು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೊಳ ಪಡಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.
ಸುತ್ತುವರೆದು ಬಂಧಿಸಲು ಅವಕಾಶವಿರುವಾಗ ಎನ್‌ಕೌಂಟರ್ ಹೆಸರಲ್ಲಿ ಹತ್ಯೆ ಮಾಡಿರುವುದನ್ನು ಸಿಪಿಎಂ ಒಪ್ಪುವುದಿಲ್ಲ ಮತ್ತು ಅಂತಹ ದುಷ್ಕೃತ್ಯವನ್ನು ಸಿಪಿಎಂ ಬಲವಾಗಿ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
*ಮುಖ್ಯ ವಾಹಿನಿಗೆ ಬರಲು ಸಿಪಿಎಂ ಕರೆ
ವ್ಯಕ್ತಿಗತ ಹಿಂಸಾತ್ಮಕ ಹಾದಿಯು ಖಂಡಿತಾ ಸಮಾಜದಲ್ಲಿ ಯಾವ ಬದಲಾವಣೆಯನ್ನು ತರಲಾಗದು ಎಂಬುದು ಈಗಾಗಲೆ ಸಾಬೀತಾದ ವಿಚಾರವಾಗಿದೆ. ಆದ್ದರಿಂದ ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲರು ಮುಖ್ಯವಾಹಿನಿಗೆ ಬಂದು ಜನ ಚಳುವಳಿಯಲ್ಲಿ ತೊಡಗಿ ಸಮಾಜದ ಬದಲಾವಣೆಗಾಗಿ ಅಥವಾ ಶೋಷಣೆಯ ವಿರುದ್ದ ಸಕ್ರಿಯರಾಗುವುದೊಂದೆ ಸರಿದಾರಿ ಯಾಗಿದೆ. ಅದೇ ರೀತಿ ರಾಜ್ಯ ಸರಕಾರವೂ ಇವರನ್ನು ಮುಖ್ಯವಾಹಿನಿಗೆ ತರುವ ಅಗತ್ಯ ನೈಜ ಕ್ರಮಗಳನ್ನು ವಹಿಸುವಂತೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಒತ್ತಾಯಿಸಿದ್ದಾರೆ.