ಹಿರಿಯ ಪತ್ರಕರ್ತ ವಿ ಟಿ ರಾಜಶೇಖರ್ ಶೆಟ್ಟಿ ನಿಧನಕ್ಕೆ ಪರಿಶಿಷ್ಟ ಜಾತಿ, ಬುಡಕಟ್ಟು ಸಂಸ್ಥೆಗಳ ಮಹಾಒಕ್ಕೂಟ ಸಂತಾಪ
ಮಂಗಳೂರು: ನಾಡಿನ ಹಿರಿಯ ಚಿಂತಕ, ಪತ್ರಕರ್ತ ವಿ ಟಿ ರಾಜಶೇಖರ್ ಶೆಟ್ಟಿ (93) ಅವರ ನಿಧನಕ್ಕೆ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ - ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಆಡಳಿತಗಾರರಲ್ಲಿ ಡಾ. ಅಂಬೇಡ್ಕರ್ ವಿರೋಧಿ ಧೋರಣೆ ಪ್ರಬಲವಿದ್ದ ಕಾಲದಲ್ಲಿ ಹಾಗೂ ಅಂಬೇಡ್ಕರ್ ಭಾಷಣ ಮತ್ತು ಬರಹಗಳ ಸಂಪುಟಗಳು ಆಂಗ್ಲ ಭಾಷೆಯಲ್ಲೇ ಪ್ರಕಟಗೊಳ್ಳುವ ಮುನ್ನವೇ, 1980, '90ರ ದಶಕಗಳಲ್ಲಿ, ಶಿಕ್ಷಿತ ದಲಿತರ ನಡುವೆ ಡಾ. ಅಂಬೇಡ್ಕರ್ ಚಿಂತನೆಯನ್ನು ಪಸರಿಸುವಲ್ಲಿ ವಿ ಟಿ ರಾಜಶೇಖರ್ ಶೆಟ್ಟಿ ಅವರ ಸಂಪಾದಕತ್ವದ 'ದಲಿತ್ ವಾಯ್ಸ್', ಇಂಗ್ಲಿಷ್ ನಿಯತಕಾಲಿಕ, ಮತ್ತು ಅದರಲ್ಲಿದ್ದ 'Thus spake Ambedkar' ಎಂಬ ಅಂಕಣ ಮಹತ್ವದ ಪಾತ್ರ ನಿರ್ವಹಿಸಿತ್ತು ಎಂಬುದನ್ನು ಆ ಕಾಲದಲ್ಲಿ ಸ್ವತಃ ಪತ್ರಕರ್ತರಾಗಿದ್ದ ಲೋಲಾಕ್ಷ ಅವರು ನೆನಪು ಮಾಡಿಕೊಂಡಿದ್ದಾರೆ.
ಬ್ರಾಹ್ಮಣವಾದದ ಕಟು ಟೀಕಾಕಾರರಾಗಿದ್ದು, ತುಂಬು ಜೀವನ ನಡೆಸಿದ ವಿ ಟಿ ಆರ್ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ - ಸಂಸ್ಥೆಗಳ ಮಹಾ ಒಕ್ಕೂಟ ಪ್ರಾರ್ಥಿಸುತ್ತದೆ ಎಂದು ಲೋಲಾಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.