ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ನೆರವು ಅಗತ್ಯ: ಶಾಸಕ ವೇದವ್ಯಾಸ ಕಾಮತ್

Update: 2024-11-19 16:32 GMT

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ, ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ಹಾಗೂ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನೆರವೇರಿತು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಯಕ್ಷಗಾನಕ್ಕಾಗಿ ಬದುಕನ್ನೇ ಮೀಸಲಿರಿಸಿದ ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ಇತರರಿಗೂ ಪ್ರೇರಣೆ ನೀಡಲಿದೆ. ಇದಕ್ಕಾಗಿ ಯಕ್ಷಗಾನ ಅಕಾಡೆಮಿಯಿಂದ ಇನ್ನಷ್ಟು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಂಗಳೂರಿನಲ್ಲಿ ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಅಭೂತಪೂರ್ವ ಕೆಲಸ ಮಾಡಿದ್ದೀರಿ. ತುಳುನಾಡು-ಕರಾವಳಿ ಭಾಗದಲ್ಲಿ ಹಿರಿಯರು ಯಕ್ಷಗಾನಕ್ಕೆ ಬಹಳಷ್ಟು ಕೊಡುಗೆ ಕೊಟ್ಟವರಿದ್ದಾರೆ. ಯಕ್ಷಗಾನದ ಮೂಲಕ ಜನರಿಗೆ ಇತಿಹಾಸ ಪುರಾಣದ ಜ್ಞಾನ ಹಂಚಿ ಕೊಂಡಿದ್ದಾರೆ. ಅಂತಹ ಕಲಾವಿದರಿಗೆ ಕಷ್ಟ ಬಂದಾಗ ಅವರಿಗೆ ಶಕ್ತಿಕೊಡುವ ಕೆಲಸವಾಗಬೇಕಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಕ್ಕೆ ಸಿದ್ಧ ಎಂದರು.

ಪ್ರಶಸ್ತಿ ಪ್ರದಾ :2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ನೀಡಲಾಯಿತು. ಭಾಗವತ ದಿನೇಶ್ ಅಮ್ಮಣ್ಣಾಯ, ಕಲಾವಿದರಾದ ನಾರಾಯಣಪ್ಪ ಎ.ಆರ್., ಜಬ್ಬಾರ್ ಸಮೋ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆನ್ನಪ್ಪ ಗೌಡ ಸಜಿಪ ಅವರು ಗೌರವ ಪ್ರಶಸ್ತಿ ಪಡೆದುಕೊಂಡರು.

ಯಕ್ಷಸಿರಿ ಪ್ರಶಸ್ತಿಯನ್ನು ರಘುನಾಥ ಶೆಟ್ಟಿ ಬಾಯಾರು, ದಿವಾಕರ ದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ ಮರಕಾಲ, ಶಿರಳಗಿ ತಿಮ್ಮಪ್ಪ ಹೆಗಡೆ, ಬಾಬು ಕುಲಾಲ್ ಹಳ್ಳಾಡಿ, ಶಿವಯ್ಯ, ಜೀಯಪ್ಪ ಅವರಿಗೆ ನೀಡಲಾಯಿತು. ದಿ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಯನ್ನು ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ ಹಾಗೂ 2022 ಮತ್ತು 20233ನೇ ಸಾಲಿನ ಪುಸ್ತಕ ಬಹು ಮಾನ ವಿದ್ವಾನ್ ಗಣಪತಿ ಭಟ್, ಡಾ. ಮನೋರಮಾ ಬಿ.ಎನ್., ಡಾ. ಸತೀಶ್ ಜಿ.ನಾಯ್ಕ, ಎಚ್.ಸುಜಯೀಂದ್ರ ಹಂದೆ ಹಾಗೂ 2021ನೇ ಸಾಲಿನ ಪುಸ್ತಕ ಬಹುಮಾನವನ್ನು ಪೊಳಲಿ ನಿತ್ಯಾನಂದ ಕಾರಂತ ಅವರಿಗೆ ನೀಡಿ ಗೌರವಿಸಲಾಯಿತು.

ವಿಶೇಷ ಆಕರ್ಷಣೆಯಾಗಿ ಹೆಸರಾಂತ ಕಲಾವಿದರಿಂದ ದಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದದ ಭಾಗ ‘ಸೀತಾ ಪರಿತ್ಯಾಗ’ ಯಕ್ಷಗಾನ ಪ್ರದರ್ಶನ ನಡೆಯಿತು.

ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಯಕ್ಷಗಾನ ಅಕಾಡಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಕೊಡವ ಅಕಾ ಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಗ್ಯಾರಂಟಿ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮ್ರತ, ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ರಾಜೇಶ್ ಜಿ ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯರಾದ ಸತೀಶ್ ಅಡಪ, ರಾಜೇಶ್ ಕುಳಾಯಿ, ವಿಜಯಕುಮಾರ್ ಶೆಟ್ಟಿ, ಕೃಷ್ಣಪ್ಪ ಪೂಜಾರಿ ಕಿನ್ಯಾ, ಗುರುರಾಜ ಭಟ್ , ಮೋಹನ ಕದ್ರಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News