ಹರೇಕಳದಲ್ಲಿ ಜನಸಂಪರ್ಕ ಸಭೆ| ಖಾಲಿ ಜಮೀನು ಪಟ್ಟಿ ನೀಡಲು ಅಧಿಕಾರಿಗಳಿಗೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ
ಕೊಣಾಜೆ: ಹರೇಕಳ ಗ್ರಾಮದಲ್ಲಿ 9.50 ಎಕರೆ ಜಮೀನು ನಿವೇಶನರಹಿತರಿಗೆ ಮೀಸಲಿಡಲಾಗಿದೆ. ಯಾವುದೇ ಗ್ರಾಮ ದಲ್ಲೂ ಇಷ್ಟು ಬೇಗ ಜಾಗ ಗುರುತಿಸುವ ಕೆಲಸ ಆಗಿಲ್ಲ. ವಾರದೊಳಗೆ ಗ್ರಾಮದಲ್ಲಿರುವ ಸರ್ಕಾರಿ ಜಾಗದ ಪಟ್ಟಿ ನೀಡು ವಂತೆ ವಿದಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅವರು ಹರೇಕಳ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಮೀಸಲು ಜಮೀನಿನಲ್ಲಿ ಅಂಗನವಾಡಿ, ಮೈದಾನ, ಪಾರ್ಕ್ ಸಹಿತ ವ್ಯವಸ್ಥಿತ ರೀತಿಯಲ್ಲಿ ಮಾದರಿಯಾಗಿ ಲೇಔಟ್ ಗೆ ನೀಲನಕಾಶೆ ರೂಪಿಸಿ. ಈ ವಿಚಾರದಲ್ಲಿ ಕಂದಾಯ, ಸರ್ವೇ ಮತ್ತು ಇಂಜಿನಿಯರಿಂಗ್ ಇಲಾಖೆ ಜೊತೆಯಾಗಿ ಯೋಜನೆ ರೂಪಿಸಬೇಕು. ಅಲ್ಲದೆ ಗ್ರಾಮದಲ್ಲಿರುವ ಸರ್ಕಾರಿ ಜಾಗದ ಪಟ್ಟಿ ವಾರದಲ್ಲಿ ಕೊಡಬೇಕು ಎಂದು ತಿಳಿಸಿದರು.
40 ವರ್ಷಗಳಿಂದ ಬಾಕಿಯಿದ್ದವರಿಗೆ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಲು ಹತ್ತು ವರ್ಷ ಸಮಯ ನೀಡಲಾಗಿದ್ದು ಈಗ ಬಂದ್ ಆಗಿದೆ. ಯಾರೋ ಮಾರಿದ ಸರ್ಕಾರಿ ಜಾಗ ಖರೀದಿಸಿ ಹಕ್ಕು ಪತ್ರಕ್ಕಾಗಿ ಅತ್ತರೆ ಆಗದು.ಯಾರದ್ದೋ ಜಾಗದಲ್ಲಿ ಮನೆ ಕಟ್ಟಲು ಪಂಚಾಯಿತಿ ಪರವಾನಿಗೆ ಕೊಡಲು ಆಗುವುದಿಲ್ಲ ಎಂದು ತಿಳಿಸಿದರು.
ಎರಡು ಎಕರೆ ಇದ್ದವರು ನಮ್ಮದು ಕುಮ್ಕಿ ಜಮೀನು ಎಂದು ಮತ್ತೆ ಮೂರು ಎಕರೆ ಕೇಳ್ತಾರೆ. ಇದರಿಂದಾಗಿ ಏನೂ ಇಲ್ಲದವನಿಗೆ ಐದು ಸೆಂಟ್ಸ್ ಜಮೀನು ನೀಡಲು ಸಾಧ್ಯವಾಗುತ್ತಿಲ್ಲ ಇದು ನಮ್ಮ ಸಮಸ್ಯೆ ಎಂದು ಖೇದ ವ್ಯಕ್ತಪಡಿಸಿದರು.
ಹರೇಕಳ ಖಾಸಗಿ ಶಿಕ್ಷಣ ಸಂಸ್ಥೆಯಿಂದ ಒಂದೂವರೆ ಲಕ್ಷ ತೆರಿಗೆ ಬಾಕಿಯಿದೆ ಎಂದು ಪಿಡಿಓ ಮುತ್ತಪ್ಪ ಡಿ. ತಿಳಿಸಿದರು.
ಗ್ರಾ.ಪಂ. ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಜಲಜೀವನ್ ಮಿಷನ್ ಸಹಾಯಕ ಅಭಿಯಂತರ ಶಿವಣ್ಣ, ತಾ.ಪಂ. ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಸತ್ತಾರ್ ಬಾವಲಿಗುಲಿ, ಹನೀಫ್, ರಫೀಕ್, ಎಸ್.ಎಂ.ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ಮುತ್ತಪ್ಪ ಡಿ. ವಂದಿಸಿದರು.